ಶಿವಮೊಗ್ಗ:ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿನ ರೈಲ್ವೆ ಮೇಲ್ಸೇತುವೆಯ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ-25 ರಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸಿರುವುದರಿಂದ ಕೆಲಸ ನಡೆಯುವ ಸಂದರ್ಭದಲ್ಲಿ ಸೇತುವೆ ಮೇಲೆ ಲಘು ವಾಹನಗಳು ಮಾತ್ರ ಸಂಚರಿಸಲು ಅನುಕೂಲವಾಗುವಂತೆ ಹಾಗೂ ಮೇಲ್ಸೇತುವೆಯ ಎರಡು ಬದಿಯಲ್ಲಿ ಬ್ಯಾರಿಕೇಡಿಂಗ್ ಅಳವಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲು 30 ದಿನಗಳ ಅವಧಿಗೆ ಸವಳಂಗ-ಹೊನ್ನಾಳಿ ರಸ್ತೆಯ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ.
ಮೇಲ್ಸೇತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧ ಹೊಸಪೇಟೆ-ಶಿವಮೊಗ್ಗ ಮಾರ್ಗಕ್ಕೆ ಪರ್ಯಾಯ ಮಾರ್ಗವಾಗಿ ಶಿವಮೊಗ್ಗದಿಂದ-ಹೊಳಲೂರು-ಹೊನ್ನಾಳಿಗೆ ಸಂಚರಿಸುವ ಲಘು ವಾಹನಗಳು ಸವಳಂಗ ರಸ್ತೆ-ಕುವೆಂಪು ನಗರ ಕ್ರಾಸ್-ರಾಗಿಗುಡ್ಡದ ಮೂಲಕ ರಾಜ್ಯ ಹೆದ್ದಾರಿ-25ಕ್ಕೆ ತಲುಪುವುದು.
ಶಿವಮೊಗ್ಗದಿಂದ ಹೊಳಲೂರಿಗೆ ಸಂಚರಿಸುವ ಭಾರಿ ವಾಹನಗಳು ಸವಳಂಗ ರಸ್ತೆ-ಅಬ್ಬಲಗೆರೆ-ಕೊಮ್ಮನಾಳ-ಸೊಮಿನಕೊಪ್ಪ-ಹರಮಘಟ್ಟ-ಹೊಳಲೂರು ಮಾರ್ಗವಾಗಿ ಸಂಚರಿಸುವುದು.
ಶಿವಮೊಗ್ಗದಿಂದ-ಹೊನ್ನಾಳಿ-ಹರಿಹರ ಕಡೆಗೆ ಸಂಚರಿಸುವ ಭಾರಿ ವಾಹನಗಳು ಸವಳಂಗ ರಸ್ತೆ-ಸವಳಂಗ-ನ್ಯಾಮತಿ ಮೂಲಕ ಹೊನ್ನಾಳಿಗೆ ಸಂಚರಿಸುವುದು. ಹೊನ್ನಾಳಿ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಲಘು ವಾಹನಗಳಿಗೆ ಮಾತ್ರ ರೈಲ್ವೆ ಮೇಲ್ಸೇತುವೆ ಮೇಲೆ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.