ಶಿವಮೊಗ್ಗ: ಸೋಮವಾರ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಜಿಲ್ಲಾದ್ಯಂತ ಅಪಾರ ಹಾನಿ ಉಂಟಾಗಿದ್ದು, ಸಾವು ನೋವು ಸಂಭವಿಸಿದೆ. ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಶ್ರಯ ಬಡಾವಣೆಯ ನಿವಾಸಿ ಲಕ್ಷ್ಮೀ ಬಾಯಿ (28) ಎಂಬವರು ಕುರಿ ಮರಿಗಳಿಗೆ ಮೇವು ತರಲು ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಮತ್ತು ಹಲವಾರು ಕಡೆ ಮಳೆಯಿಂದ ಹಾನಿ ಉಂಟಾಗಿತ್ತು.
ಹಾಗಾಗೀ ಮಂಗಳವಾರದಂದು ಶಿವಮೊಗ್ಗದ ಶಾಸಕರಾದ ಚೆನ್ನಬಸಪ್ಪ ಸಿಡಿಲು ಬಡಿದು ಸಾವನ್ನಪ್ಪಿದ ಲಕ್ಷ್ಮೀ ಬಾಯಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಹಾಗೂ ಬೋಮ್ಮನಕಟ್ಟೆಯಲ್ಲಿ ಪ್ರಕಾಶ್ ಎನ್ನುವವರು ಮನೆಯ ಮೇಲ್ಛಾವಣಿ ಕುಸಿದು ಸಾಕಷ್ಟು ಹಾನಿ ಆಗಿದ್ದು, ಅಲ್ಲಿ ಸಹ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಜಿಲ್ಲಾದ್ಯಂತ ಭಾರೀ ಮಳೆ: ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಪರಿಹಾರ ಪತ್ರ ವಿತರಿಸಿದ ಶಾಸಕ ಬಿ.ವೈ.ವಿಜಯೇಂದ್ರ:ಇನ್ನು ಶಿಕಾರಿಪುರ ತಾಲೂಕಿನ ಹುಲ್ಲಿನಕೊಪ್ಪ ಗ್ರಾಮದಲ್ಲಿ ನಿನ್ನೆ ಮಳೆ ಹಾನಿ ಸಂಬಂಧಿಸಿದಂತೆ ಚಿಕ್ಕಪ್ಪ ಮಡಿವಾಳ ಎನ್ನುವವರಿಗೆ ಪರಿಹಾರದ ಆದೇಶ ಪತ್ರವನ್ನ ಶಾಸಕ ಬಿ.ವೈ.ವಿಜಯೇಂದ್ರ ಅವರು ವಿತರಿಸಿದ್ದಾರೆ. ಒಟ್ಟಾರೆ ನಿನ್ನೆ ಸುರಿದ ಮಳೆ ಸಾಕಷ್ಟು ಅವಘಡಗಳಿಗೆ ಕಾರಣವಾಗಿದ್ದು ಸಾವು ನೋವುಗಳನ್ನು ಉಂಟು ಮಾಡಿದೆ. ಇದರ ಮಧ್ಯೆ ಜನ ಪ್ರತಿನಿಧಿಗಳು ತಕ್ಷಣ ಜನರ ನೇರವಿಗೆ ಧಾವಿಸಿರುವುದು ಉತ್ತಮ ಬೆಳವಣಿಗೆ ಆಗಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಒಂಬತ್ತು ವರ್ಷ, ವಿಶೇಷವಾಗಿ ಆಚರಿಸಲು ರಾಷ್ಟ್ರೀಯ ಸಂಘಟನೆ ತೀರ್ಮಾನ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂಭತ್ತು ವರ್ಷ ತುಂಬಿದ್ದು, ಪ್ರತಿ 5 ಲೋಕಸಭೆ ಹಾಗೂ 5 ವಿಧಾನಸಭಾ ಸ್ತರದಲ್ಲಿ ವಿಶೇಷವಾಗಿ ಆಚರಣೆ ಮಾಡಲು ರಾಷ್ಟ್ರೀಯ ಸಂಘಟನೆ ತೀರ್ಮಾನಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ಆರ್ಟಿಕಲ್ 370ರದ್ದು, ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಖ್, 11 ಕೋಟಿ ಶೌಚಾಲಯ ನಿರ್ಮಾಣ, ಕೊರೋನಾ ಸಮಯದಲ್ಲಿ ಎರಡು ವರ್ಷಗಳ ಕಾಲ ದೇಶದ ಜನರಿಗೆ ಆರೋಗ್ಯ ರಕ್ಷಣೆ ಮಾಡಿ 200 ಕೋಟಿ ಲಸಿಕೆ ಸೇರಿದಂತೆ ಮಹತ್ತರ ಸಾಧನೆ ಮಾಡಿ ವಿಶ್ವ ನಾಯಕ ಎನಿಸಿಕೊಂಡಿದ್ದಲ್ಲದೇ ಅಭಿವೃದ್ಧಿಯಲ್ಲೂ ವೇಗದ ಮುನ್ನಡೆ ಸಾಧಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ಇಂದಿನಿಂದ ಜೂನ್ 30ರವರೆಗೆ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿ ವಾರ್ಡ್‌ಗಳಲ್ಲಿ ಕನಿಷ್ಠ 250 ಜನರ ಭೇಟಿ ಮಾಡಿ ಅವರನ್ನು ಸಂಪರ್ಕಿಸಿ ಸರ್ಕಾರದ ಬಗ್ಗೆ ಮಾಹಿತಿ ಪಡೆಯುವ ಸಂಪರ್ಕ ಸಮರ್ಥನಾ ಕಾರ್ಯಕ್ರಮ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2000 ಹೆಚ್ಚು ಕೀ ವೋಟರ್‌ಗಳನ್ನು ಸೇರಿಸಿ ಸಮಾವೇಶ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಕೇಂದ್ರದ ಓರ್ವ ಮಂತ್ರಿ ಹಾಗೂ ರಾಜ್ಯದ ಮುಖಂಡರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಬಿಜೆಪಿ ಕಾರ್ಯಕ್ರಮದ ಬ್ಯಾನರ್ನಲ್ಲಿ ಸಿದ್ದರಾಮಯ್ಯ ಫೋಟೊ! -ವಿಡಿಯೋ