ಶಿವಮೊಗ್ಗ: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ತೀರ್ಥಹಳ್ಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಸುರಿದ ಪರಿಣಾಮ ತುಂಗಾ ನದಿ ಭರ್ತಿಯಾಗಿ ಮೈದುಂಬಿ ಹರಿಯುತ್ತಿದೆ.
ವರುಣನ ಆರ್ಭಟಕ್ಕೆ ಮೈದುಂಬಿ ಹರಿಯುತ್ತಿರುವ ತುಂಗೆ - ತುಂಗಾ ನದಿ ಭರ್ತಿಯಾಗಿ ಮೈದುಂಬಿ ಹರಿಯುತ್ತಿದೆ
ಮಲೆನಾಡಿನಲ್ಲಿ ವರುಣನ ಆರ್ಭಟ ಪ್ರತೀ ವರ್ಷದಂತೆ ಈ ವರ್ಷವೂ ಸಹ ಜೋರಾಗಿದ್ದು, ಶಿವಮೊಗ್ಗ ಸುತ್ತಮುತ್ತಲಿನ ರೈತರ ಜೀವನಾಡಿಯಾಗಿರುವ ತುಂಗೆ ಮೈದುಂಬಿ ಹರಿಯುತ್ತಿದ್ದಾಳೆ. ಇನ್ನು ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪ ಸಹ ಮುಳುಗಿದ್ದು, ಜನರು ತುಂಗೆಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಗಾಜನೂರಿನಲ್ಲಿನ ತುಂಗಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವುದರಿಂದ ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪ ಸಂಪೂರ್ಣವಾಗಿ ಮುಳುಗಿದೆ. ಇದನ್ನು ಕಣ್ತುಂಬಿಕೊಳ್ಳಲು ಬೆಳಗ್ಗೆಯಿಂದಲೇ ಜನರು ಮಂಟಪದ ಬಳಿಗೆ ಬರುತ್ತಿದ್ದಾರೆ. ತುಂಗೆಗೆ ಪೂಜೆ ಸಲ್ಲಿಸಿ, ನಾಡನ್ನು ಸುಭಿಕ್ಷವಾಗಿ ಇಡುವಂತೆ ಬೇಡಿಕೊಳ್ಳುತ್ತಿದ್ದಾರೆ.
ಮೂರು ಟಿಎಂಸಿ ಸಾಮರ್ಥ್ಯದ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಲ್ಲಿ ಒಳಹರಿವಿಗೆ ತಕ್ಕಂತೆ ಹೊರ ಹರಿವು ಇದೆ. ಇಂದು ಜಲಾಶಯಕ್ಕೆ 57,774 ಕ್ಯೂಸೆಕ್ ನೀರು ಒಳಹರಿವು ಇದ್ದು, 58,770 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.