ಶಿವಮೊಗ್ಗ:ಜಿಲ್ಲೆಯಲ್ಲಿ ಅಡಿಕೆ, ಭತ್ತ, ಮೆಕ್ಕೆಜೋಳ ಸೇರಿದಂತೆ ಎಲ್ಲ ಬೆಳೆಗಳು ಕಟಾವಿಗೆ ಬಂದಿವೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ(heavy rain in Shivamogga) ಯಾವುದೇ ಬೆಳೆಯನ್ನು ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಕೊಯ್ಲು ಮಾಡಿದರೂ ಆ ಬೆಳೆಯನ್ನು ಸಂಸ್ಕರಣೆ ಮಾಡುವುದು ಕಷ್ಟವಾಗಿದೆ. ಹೀಗಾಗಿ ಈ ಬಾರಿ ಮಲೆನಾಡಿನ ರೈತರು ಸಂಪೂರ್ಣವಾಗಿ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ನವೆಂಬರ್ ತಿಂಗಳ ಆರಂಭದಿಂದಲೇ ಮಲೆನಾಡಿನಲ್ಲಿ ಅಡಿಕೆ ಹಾಗೂ ಭತ್ತದ ಕೊಯ್ಲು ಆರಂಭಗೊಳ್ಳುತ್ತದೆ. ಆದರೆ ನವೆಂಬರ್ ತಿಂಗಳ ಆರಂಭದಿಂದಲೂ ವರುಣನ ಆರ್ಭಟ ಇರುವುದರಿಂದ ಯಾವುದೇ ಬೆಳೆಗಳ ಕೊಯ್ಲು ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಭತ್ತದ ಬೆಳೆ(paddy crop) ಕಟಾವು ಮಾಡದಿದ್ದರೆ ಭತ್ತ ನೀರುಪಾಲಾಗುತ್ತದೆ. ಪೈರನ್ನು ಕಟಾವು ಮಾಡಲು ಮಳೆ ಬಿಡುವು ನೀಡುತ್ತಿಲ್ಲ. ಇನ್ನೊಂದೆಡೆ ಮಳೆಯ ಮಧ್ಯೆಯೂ ಹೇಗೋ ಭತ್ತದ ಪೈರನ್ನು ಕಟಾವು ಮಾಡಿದ ರೈತರ ಸ್ಥಿತಿಯಂತೂ ಹೇಳತೀರದಾಗಿದೆ. ಕಟಾವು ಮಾಡಿದ ಭತ್ತ ಗದ್ದೆಯಲ್ಲೇ ಉಳಿದಿದೆ. ಆದರೆ ಈ ಅವಧಿಯಲ್ಲಿ ಬಂದ ಭಾರಿ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಕೊಯ್ದು ಹಾಕಿರುವ ಭತ್ತದ ಫಸಲು ಗದ್ದೆಯಲ್ಲೇ ಮೊಳಕೆಯೊಡೆಯುತ್ತಿದೆ.