ಶಿವಮೊಗ್ಗ:ಕೊಡಗಿನಲ್ಲಿ ಗುಡ್ಡ ಕುಸಿದ ಪರಿಣಾಮ ನೂರಾರು ಮಂದಿ ಮನೆ ಕಳೆದುಕೊಂಡಿದ್ದರು. ಸಾವಿರಾರು ಎಕರೆ ತೋಟ ನಾಶವಾಗಿತ್ತು. ಇದೀಗ ಕೊಡಗಿನ ಸ್ಥಿತಿಯೇ ಜಿಲ್ಲೆಯಲ್ಲೂ ಉಂಟಾಗುವ ಆತಂಕ ಎದುರಾಗಿದೆ.
ಜಿಲ್ಲೆಯ ಮಲೆನಾಡು ತಾಲೂಕುಗಳಾದ ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ವಾಡಿಕೆಯಂತೆ ಹದಿನೈದು ದಿನದಲ್ಲಿ ಸುರಿಯಬೇಕಾಗಿದ್ದ ಮಳೆ ಈ ಬಾರಿ ಒಂದೇ ದಿನದಲ್ಲಿ ಸುರಿದ ಪರಿಣಾಮವಾಗಿ ಈ ತಾಲೂಕುಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಗುಡ್ಡ ಕುಸಿಯುವುದಕ್ಕೂ ಮುನ್ನ ಭಾರಿ ಪ್ರಮಾಣದಲ್ಲಿ ಶಬ್ದ ಕೇಳಿಬಂದಿರುವುದು ಮಲೆನಾಡಿಗೆ ಮುಂದಿನ ದಿನಗಳಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ ಎಂಬುದರ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದರು ಜಿಲ್ಲೆಯಲ್ಲಿ ಇದುವರೆಗೆ ಅತಿವೃಷ್ಟಿಯಿಂದಾಗಿ 418 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಇನ್ನು ಮನೆಗಳು ಬೀಳುತ್ತಲೇ ಇವೆ. ಜೊತೆಗೆ ಗುಡ್ಡ ಕುಸಿದು ತೋಟಗಳು ನಾಶವಾಗುತ್ತಿವೆ. ಹೀಗಾಗಿ, ನಷ್ಟದ ಮೊತ್ತ ಇನ್ನೂ ನೂರಾರು ಕೋಟಿ ರೂಪಾಯಿ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ.
ಹತ್ತು ಗುಡ್ಡಗಳು ಕುಸಿತ:ಕಳೆದ ವರ್ಷ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿದು ನೂರಾರು ಎಕರೆ ಜಮೀನು ಹಾಗೂ ತೋಟ ನಾಶವಾಗಿತ್ತು. ಈ ಪ್ರಕರಣವನ್ನು ಹೊರತುಪಡಿಸಿದರೆ, ಬೇರೆಲ್ಲೂ ಗುಡ್ಡಕುಸಿದಿರಲಿಲ್ಲ. ಆದರೆ, ಈ ಬಾರಿ ಒಂದೇ ದಿನ ಸುರಿದ 300 ಮಿಲಿ ಮೀಟರ್ ಮಳೆಗೆ ತೀರ್ಥಹಳ್ಳಿ ತಾಲೂಕು ಒಂದರಲ್ಲೇ ಹತ್ತು ಗುಡ್ಡಗಳು ಕುಸಿದಿವೆ.
ಮಲೆನಾಡಿನಲ್ಲಿ ಗುಡ್ಡ ಕುಸಿತವಾಗಿರುವುದು ಹೆದ್ದಾರಿ ಬಂದ್ ಆಗುವ ಆತಂಕ:ಬೆಕ್ಷಿಕೆಂಜಿಗುಡ್ಡೆಯ ಕೊಡಿಗೆ ಗ್ರಾಮದ ಗುಡ್ಡ ಕುಸಿದು ನೂರಾರು ಎಕರೆ ಜಮೀನು ನಾಶವಾಗಿದ್ದರೆ, ಬೊಬ್ಬಿ ಸಮೀಪದ ಹುಲಿಗುಡ್ಡ ಭಾಗಶಃ ಕುಸಿದಿದ್ದು ನೂರಾರು ಎಕರೆ ಜಮೀನು ನಾಶವಾಗಿದೆ. ಈ ಗುಡ್ಡ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಅಂಬಳಿಕೆಯಲ್ಲಿ ಗುಡ್ಡ ಕುಸಿದ ಪರಿಣಾಮ ಫಸಲು ಬರುತ್ತಿದ್ದ ಅಡಕೆ ತೋಟ ನೂರಾರು ಎಕರೆ ಸಂಪೂರ್ಣ ನಾಶವಾಗಿದೆ. ಇದಲ್ಲದೆ ಶಿವಮೊಗ್ಗ ತೀರ್ಥಹಳ್ಳಿ ನಡುವಿನ ಹೆದ್ದಾರಿ ಪಕ್ಕದ ಧರೆಯೂ ಅಲ್ಲಲ್ಲಿ ಕುಸಿಯುತ್ತಿದೆ. ಒಂದು ವೇಳೆ ಧರೆಕುಸಿತ ಹೆಚ್ಚಾದಲ್ಲಿ ಈ ಹೆದ್ದಾರಿ ಬಂದ್ ಆಗುವ ಆತಂಕ ಎದುರಾಗಿದೆ.
ಓದಿ:'ಬೊಮ್ಮಾಯಿ ಸರ್ಕಾರ ಆರಂಭದಲ್ಲೇ ಒಳ್ಳೆಯ ರೀತಿ ನಡೆಯುತ್ತಿದೆ': ಹೆಚ್ ವಿಶ್ವನಾಥ್