ಶಿವಮೊಗ್ಗ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 78ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಫೆ. 27ರಂದು ನಗರದಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಸಿಎಂ ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದ ನಿವಾಸದಲ್ಲಿ ಮಾಹಿತಿ ನೀಡಿದ ಅವರು, ಪ್ರೇರಣ ಎಜುಕೇಷನಲ್ ಮತ್ತು ಸೋಶಿಯಲ್ ಟ್ರಸ್ಟ್ ಸಹಕಾರದೊಂದಿಗೆ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಹೃದಯ ವಿಭಾಗ, ಜನರಲ್ ಮೆಡಿಸಿನ್, ಶ್ವಾಸಕೋಶ ವಿಭಾಗ, ಕೀಲು ಮೂಳೆ ಮತ್ತು ಕೀಲು ಮರುಜೋಡಣೆ ವಿಭಾಗ, ಸ್ತ್ರೀ ರೋಗ ವಿಭಾಗ, ಬಿ.ಪಿ., ಇ.ಸಿ.ಜಿ, ಎಕೋ, ಜಿ.ಆರ್.ಬಿ.ಎಸ್ ಮತ್ತು ವೈದ್ಯರೊಂದಿಗೆ ಸಮಲೋಚನಾ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ಈ ಹಿಂದೆ ಅಟಲ್ ಜೀ ನೆನಪಿಗಾಗಿ ಜಿಲ್ಲೆಯಲ್ಲಿ ಪ್ರಾರಂಭ ಮಾಡಿದ್ದ ಆಯುಷ್ಮಾನ್ಭವ್ ಆರೋಗ್ಯ ಕಾರ್ಡನ್ನು ಕಾರ್ಯಕರ್ತರ ಸಹಕಾರದೊಂದಿಗೆ ಬಾಪೂಜಿ ಸೇವಾ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು ಒಂದು ಲಕ್ಷದಷ್ಟು ದಾಖಲೆಯ ರೀತಿಯಲ್ಲಿ ಮಾಡಿಸಲಾಗಿದೆ. ಶಿವಮೊಗ್ಗ-11,080, ಭದ್ರಾವತಿ-13,515, ಸಾಗರ-9,754, ಸೊರಬ-7,482, ಶಿಕಾರಿಪುರ-10,637, ತೀರ್ಥಹಳ್ಳಿ-5,533, ಹೊಸನಗರ-7,667 ಹಾಗೂ ಬೈಂದೂರು-8,998 ಹೀಗೆ ಲೋಕಸಭಾ ಕ್ಷೇತ್ರದಾದ್ಯಂತ ಕಾರ್ಡ್ ಮಾಡಿಸಲಾಗಿದೆ. ಇದರಿಂದ ಆಯುಷ್ಮಾನ್ ಕಾರ್ಡ್ನಲ್ಲಿ ಶಿವಮೊಗ್ಗ ಜಿಲ್ಲೆ 13ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಬಂದಿದೆ ತಿಳಿಸಿದರು.
ಸಿಎಂ ಜಿಲ್ಲಾ ಪ್ರವಾಸ: ಫೆ. 24 ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ. 23ಕ್ಕೆ ಜಿಲ್ಲೆಗೆ ಆಗಮಿಸುವ ಅವರು, ಅಂದು ನಗರದಲ್ಲಿ ವಾಸ್ತವ್ಯ ಹೂಡಿ ಫೆ. 24ರಂದು ನಡೆಯುವ ಎರಡು ದಿನಗಳ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟನೆ ಮಾಡಲಿದ್ದಾರೆ. ನಂತರ ಸೊರಬ ತಾಲೂಕು ಆನವಟ್ಟಿಯಲ್ಲಿ ಮೂಗೂರು, ಮೂಡಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಹಾನಗಲ್ಗೆ ತೆರಳಿ ವಿವಿಧ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಶಿಕಾರಿಪುರಕ್ಕೆ ಆಗಮಿಸಿ ಉಡುಗುಣಿ, ತಾಳಗುಂದ ಹಾಗೂ ಹೊಸೂರು ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಶಿಕಾರಿಪುರದಲ್ಲಿ 60 ಬೆಡ್ಗಳ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ಅಂದು ಸಂಜೆ ಗಿರಿಜನ ಜಾನಪದ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ವಿವಿಧ ಇಲಾಖೆಗಳ ಸಚಿವರು, ಜಿಲ್ಲೆಯ ಶಾಸಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.