ಶಿವಮೊಗ್ಗ:ಐದು ಎಕರೆ ಭೂಮಿ ಹೊಂದಿದವರು ಬಿಪಿಎಲ್ ಕಾರ್ಡ್ ವಾಪಸ್ ನೀಡಬೇಕು ಎಂಬ ಆಹಾರ ಸಚಿವ ಉಮೇಶ ಕತ್ತಿ ಹೇಳಿಕೆ ನಿಜಕ್ಕೂ ಬಾಲಿಶವಾದದ್ದು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಐದು ಎಕರೆ ಭೂಮಿ ಇದ್ದವರ ಸ್ಥಿತಿ ಏನು ಅಂತ ಆಹಾರ ಸಚಿವರಿಗೆ ತಿಳಿದಿಲ್ಲ. ಅವರು ಬಡ ರೈತನ ಕಬ್ಬಿನ ಹಣ ನೀಡದೆ ಟೋಪಿ ಹಾಕಿದ ಹಾಗೆ ಅಂದುಕೊಂಡಿರಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ, ಅದು ಯಡಿಯೂರಪ್ಪ ಕುಟುಂಬದ ಸರ್ಕಾರ ಅಂತ ಅವರ ಪಕ್ಷದವರೇ ಹೇಳ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಕಳೆದ ಒಂದು ವರ್ಷದಿಂದ ಕೊರೊನಾ ಇದ್ದ ಕಾರಣ ವೈದ್ಯರ ಸಲಹೆ ಮೇರೆಗೆ ರಾಜ್ಯ ಪ್ರವಾಸ ಮಾಡಲು ಆಗಲಿಲ್ಲ. ಈಗ ಮತ್ತೆ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುತ್ತೇನೆ. ನಾನು ಸಿಎಂ ಸ್ಥಾನದಿಂದ ಕೆಳಗೆ ಇಳಿದ ನಂತರ ರಾಜ್ಯದಲ್ಲಿ ಪ್ರವಾಹ ಬಂದು ಬೆಳೆಹಾನಿ ಆಗಿದೆ. ಭಗವಂತನ ದಯೆಯಿಂದ ನಾನು ಸಿಎಂ ಸ್ಥಾನದಲ್ಲಿ ಇರಲಿಲ್ಲ ಎಂದರು.
ಮೈತ್ರಿ ಸರ್ಕಾರ ಪತನವಾದ ಬಳಿಕ ಬಂದ ಸರ್ಕಾರ, ಎರಡು ವರ್ಷದಲ್ಲಿ ಮಾಡಿರುವ ಘೋಷಣೆ, ಜನ ಸಾಮಾನ್ಯರಿಗೆ ಹೇಗೆ ಸ್ಪಂದಿಸಿದ್ದಾರೆ ಎಂಬುದನ್ನು ನೋಡಿದ್ದೇನೆ. ಈ ದೇಶದ ವ್ಯವಸ್ಥೆಯು ಕಾರ್ಪೊರೇಟ್ ಹಾಗೂ ಶ್ರೀಮಂತರಿಗೆ ಅನುಕೂಲವಾಗುವಂಥ ವ್ಯವಸ್ಥೆಯಾಗಿದೆ. 2018 ರಿಂದ ಇದುವರೆಗೂ ಮಳೆಯಿಂದ ಹಾನಿಯಾದವರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.