ಶಿವಮೊಗ್ಗ: ಶಿವಮೊಗ್ಗವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಬಿಜೆಪಿಯನ್ನು ಹೊರ ಹಾಕಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತದಾರರಿಗೆ ಮನವಿ ಮಾಡಿದರು. ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಪರ ನಗರದ ಎನ್ಇಎಸ್ ಮೈದಾನದಲ್ಲಿ ಬುಧವಾರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ನಗರ ಇಷ್ಟು ಅಭಿವೃದ್ಧಿಯಾಗಲು ನಾನು ಕಾರಣ. ಅಂದು ಬಿ.ಎಸ್.ಯಡಿಯೂರಪ್ಪನವರು ನಮ್ಮ ಪಕ್ಷಕ್ಕೆ ಬರುತ್ತೇನೆ, ನನ್ನನ್ನು ಎಂಎಲ್ಸಿ ಮಾಡಿ, ಮಂತ್ರಿ ಮಾಡಿ ಎಂದು ಹೇಳಿದ್ದರು. ಅವರು ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡಿ ಆರ್ಥಿಕವಾಗಿ ಸಬಲರಾಗುವಂತೆ ಮಾಡಬಹುದಿತ್ತು. ಅದನ್ನು ಮಾಡಲಿಲ್ಲ. ಮೈತ್ರಿ ಸರ್ಕಾರ ಇದ್ದಾಗ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದೆ. ಬಿಜೆಪಿಯವರು ಅಧಿಕಾರದ ರುಚಿ ನೋಡಿದ್ದು ಮೈತ್ರಿ ಸರ್ಕಾರದಿಂದ ಎಂದರು.
ಶಿವಮೊಗ್ಗದ ಅಭಿವೃದ್ದಿಯಲ್ಲಿ ನನ್ನ ಪಾಲಿದೆ. ಕಮಿಷನ್ ಹಣ ಎಣಿಸಲು ಕೈ ನೋವು ಬರುತ್ತದೆ ಎಂದು ನೋಟು ಮಿಷನ್ ತಂದರು ಎಂದು ಈಶ್ವರಪ್ಪನವರಿಗೆ ಟಾಂಗ್ ನೀಡಿದರು. ಜಿಲ್ಲೆಯಲ್ಲಿ ಅಮಾಯಕ ಮಕ್ಕಳ ರಕ್ತದೋಕುಳಿ ಆಡಿದ್ದೀರಿ. ಗಣೇಶನ ಹಬ್ಬ ಬಂದ್ರೆ ಹೆಣ ಬೀಳಬೇಕಾಗಿದೆ. ಇದಕ್ಕೆಲ್ಲ ಬ್ರೇಕ್ ಹಾಕಬೇಕು. ಎಂಪಿಎಂ ಮುಳುಗಿಸಿ, ವಿಐಎಎಸ್ ಮುಚ್ಚಲು ಹೊರಟಿದ್ದೀರಿ. ಇದನ್ನು ತಡೆಯಲು ಒಮ್ಮೆ ಜೆಡಿಎಸ್ಗೆ ಮತ ನೀಡಿ ಎಂದು ಕುಮಾರಸ್ವಾಮಿ ವಿನಂತಿಸಿದರು.