ಶಿವಮೊಗ್ಗ: ಭದ್ರಾವತಿಯ ಕಾಗದ ಕಾರ್ಖಾನೆ (ಎಂಪಿಎಂ) ಗೆ ಸೇರಿದ್ದ ಸುಮಾರು 82 ಸಾವಿರ ಎಕರೆ ಅರಣ್ಯ ಭೂಮಿಯ ಗುತ್ತಿಗೆ ಅವಧಿ ಮುಗಿದಿದ್ದು, ಸರ್ಕಾರ ತಕ್ಷಣವೇ ಅದನ್ನು ವಾಪಸ್ ಪಡೆದು ಸಹಜ ಅರಣ್ಯ ಬೆಳೆಸಬೇಕು ಎಂದು 'ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ' ಆಗ್ರಹಿಸಿದೆ.
ಎಂಪಿಎಂಗೆ ಸೇರಿದ ಅರಣ್ಯ ಭೂಮಿಯನ್ನು ಸರ್ಕಾರ ವಾಪಸ್ ಪಡೆಯಲಿ: ಸರ್ಕಾರಕ್ಕೆ ಒಕ್ಕೂಟ ಆಗ್ರಹ - Govt withdraws forest land belonging to MPM
ಭದ್ರಾವತಿಯ ಕಾಗದ ಕಾರ್ಖಾನೆಗೆ ಸೇರಿದ ಸುಮಾರು 82 ಸಾವಿರ ಎಕರೆ ಅರಣ್ಯ ಭೂಮಿಯ ಗುತ್ತಿಗೆ ಅವಧಿ ಮುಗಿದಿದ್ದು, ಸರ್ಕಾರ ತಕ್ಷಣವೇ ಅದನ್ನು ವಾಪಸ್ ಪಡೆಯ ಬೇಕೆಂದು ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದಿಂದ ಆಗ್ರಹಿಸಲಾಯಿತು.
ಶಿವಮೊಗ್ಗದ ಪ್ರೆಸ್‍ಟ್ರಸ್ಟ್ ಸಭಾಂಗಣದಲ್ಲಿ ನಡೆದ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ಈ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದೆ. ಮುಖ್ಯವಾಗಿ ಮಲೆನಾಡಿನ ಕಾಡು, ನೆಲ, ಜಲದ ಮೇಲೆ ಹಕ್ಕು ಮಲೆನಾಡಿಗರಿಗೆ ಸೇರಿದ್ದು. ಅಲ್ಲಿ ನೈಸರ್ಗಿಕ ಅರಣ್ಯ ಬೆಳೆಯಬೇಕೇ ವಿನಃ ಅರಣ್ಯ ಇಲಾಖೆಗೆ, ಸರ್ಕಾರಕ್ಕೆ ಲಾಭಕೋರ ದಂಧೆ ಮಾಡುವ ಉದ್ಯಮವಾಗಬೇಕಿಲ್ಲ. ಹಸಿರು ಬೆಳೆಯಬೇಕಾದ ಜಾಗದಲ್ಲಿ ಕೆಲವರ ಹಿತಾಸಕ್ತಿಗಾಗಿ ಹಣ ಬೆಳೆಯಬೇಕಾಗಿಲ್ಲ. ವಿವಿಧ ಕಾರಣದಿಂದಾಗಿ ಒತ್ತಡಕ್ಕೆ ಸಿಲುಕಿರುವ ಮಲೆನಾಡಿನಲ್ಲಿ ಕಾಡು ಮರೆಯಾಗುತ್ತಿರುವಾಗ ಬರೋಬ್ಬರಿ 80 ಸಾವಿರ ಎಕರೆ ಕಾಡು ಬೆಳೆಸುವ ಅವಕಾಶವನ್ನು ಮಲೆನಾಡಿಗರು ಕಳೆದುಕೊಳ್ಳಲು ಸಿದ್ಧರಿಲ್ಲ. ಹಾಗಾಗಿ ಸರ್ಕಾರ, ಎಂಪಿಎಂ ಲೀಜ್ ಅವಧಿ ಮುಗಿಯುತ್ತಿದ್ದಂತೆ ಆ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಅಲ್ಲಿ ನೈಸರ್ಗಿಕ ಕಾಡು ಬೆಳೆಯಲು ರಕ್ಷಣೆ ಒದಗಿಸಬೇಕು ಎಂದು ವೇದಿಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಹೋರಾಟದ ಸ್ವರೂಪದ ಕುರಿತು ಸುದೀರ್ಘ ಚರ್ಚೆ ನಡೆಸಿದ ಒಕ್ಕೂಟ, ಆ ಕುರಿತ ಹಲವು ನಿರ್ಣಯಗಳನ್ನು ಅಂಗೀಕರಿಸಿ, ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿತು. ಎಂಪಿಎಂ ಕಾರ್ಖಾನೆ ನಡೆಯುತ್ತಿರುವಾಗ ಸರ್ಕಾರ ಪಶ್ಚಿಮಘಟ್ಟದ ಹಲವು ಕಡೆ ಸುಮಾರು 82 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನ 40 ವರ್ಷಗಳ ಅವಧಿಗೆ ಎಂಪಿಎಂ ನೆಡುತೋಪು ನಿರ್ಮಾಣಕ್ಕೆ ನೀಡಿತ್ತು. ಆದರೆ ಈ ಗುತ್ತಿಗೆ ಅವಧಿ ಇದೇ ಆಗಸ್ಟ್. 12ಕ್ಕೆ ಮುಗಿದಿದೆ ಮತ್ತು ಕಾರ್ಖಾನೆಯೂ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ಮುಂದುವರೆಸದೇ ಮತ್ತು ಅಲ್ಲಿ ನೀಲಗಿರಿ ತೋಪು ಬೆಳೆಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.