ಶಿವಮೊಗ್ಗ:ನಗರದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಇನ್ನು ಕೆಲವು ಶಾಲೆಗಳಂತೂ ಮುರಿದು ಬೀಳುವ ಸ್ಥಿತಿಯಲ್ಲಿವೆ. ಇಂತಹ ಶಾಲೆಗಳಲ್ಲಿ ಮಕ್ಕಳ ಕಲಿಕೆ ಮುಂದುವರೆದರೆ ಸರ್ಕಾರಿ ಶಾಲೆಗಳಿಗೆ ಒಬ್ಬ ವಿದ್ಯಾರ್ಥಿಯೂ ಸೇರದೆ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಬಳಕೆ ಮಾಡಿಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ಯೋಜನೆ ಇದೆ. ಆದರೆ ಸರ್ಕಾರದ ಅನುದಾನದಲ್ಲಿ ಶಾಲೆಗಳ ದುರಸ್ತಿ ಅಸಾಧ್ಯವಾಗಿದೆ. ಈಗಾಗಲೇ ನಗರದ ಸರ್ಕಾರಿ ಶಾಲೆಗಳಲ್ಲಿನ ಕುಂದುಕೊರತೆ, ಸಮಸ್ಯೆಗಳು, ನಿರೀಕ್ಷೆಗಳು, ಶೌಚಾಲಯ, ಕುಡಿಯುವ ನೀರು, ಕಟ್ಟಡ ದುರಸ್ತಿ, ಶಾಲಾ ಕಾಂಪೌಂಡ್, ಸುಣ್ಣಬಣ್ಣ ಮುಂತಾದವುಗಳ ಕುರಿತು ಆಯಾ ಶಾಲೆಗಳ ಮುಖ್ಯಸ್ಥರು ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರುಗಳಿಂದ ಪ್ರಸ್ತಾವನೆಯನ್ನು ತರಿಸಿಕೊಳ್ಳಲಾಗಿದೆ. ಅದರ ಖರ್ಚು, ವೆಚ್ಚದ ಕುರಿತು ಪ್ರಸ್ತಾವನೆ ತಯಾರಿಸಲಾಗಿದ್ದು, ಅಂದಾಜು ಪಟ್ಟಿಯಂತೆ ಆದ್ಯತೆಯನುಸಾರ ದಾನಿಗಳಿಂದ ಸಿಗುವ ಅನುದಾನದಿಂದ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.