ಶಿವಮೊಗ್ಗ:ನೌಕರಿಯಲ್ಲಿ ಹಿಂಬಡ್ತಿ ಅನುಭವಿಸಿ, ಕಳೆದ 6 ತಿಂಗಳಿನಿಂದ ವೇತನವೂ ಸಿಗದ ಕಾರಣ ಸರ್ಕಾರಿ ನೌಕರರೋರ್ವರು ನಾಪತ್ತೆಯಾಗಿದ್ದಾರೆ ಎನ್ನಲಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಸೋಮಯ್ಯ ಲೇಔಟ್ ನಿವಾಸಿ ಪ್ರಭಾಕರ್ ಕಾಣೆಯಾಗಿದ್ದಾರೆ. ಪ್ರಭಾಕರ್ ಅವರ ಪತ್ನಿ ದೀಪ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಭಾಕರ್ ಅವರು ಈ ಹಿಂದೆ ಶಿಕ್ಷಕರಾಗಿದ್ದರು. ಬಳಿಕ ಹೊನ್ನಾಳಿಯ ಬಿಇಒ ಕಚೇರಿಗೆ ಎಫ್ಡಿಎ ಆಗಿ ನೇಮಕಗೊಂಡಿದ್ದರು. ನಂತರ ಸರ್ಕಾರ ಶಿಕ್ಷಕರ ಹುದ್ದೆಗೆ ಸರಿ ಸಮಾನ ಹುದ್ದೆ ನೀಡುವುದಾಗಿ FDA ಯಿಂದ SDA ಆಗಿ ಹಿಂಬಡ್ತಿ ನೀಡಿ, ಹೊನ್ನಾಳಿಯಿಂದ ಚಿತ್ರದುರ್ಗ ಜಿಲ್ಲೆ ಬೇತೂರು ಪಾಳ್ಯಕ್ಕೆ ವರ್ಗಾವಣೆ ಮಾಡಿತ್ತು. ಇದರಿಂದ ತೀವ್ರವಾಗಿ ಬೇಸರಗೊಂಡಿದ್ದರಂತೆ. ಬೆಂಗಳೂರಿನ ಶಿಕ್ಷಣ ಇಲಾಖೆಯ ಕಚೇರಿಗೆ ಸಾಕಷ್ಟು ಸಲ ಅಲೆದಾಡಿದರೂ, ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ.
ಪ್ರಭಾಕರ್ ವರ್ಗಾವಣೆಗೊಂಡ ಕಾರಣ ಇವರ ಹಿಂದಿನ ನೌಕರಿಯ ವೇತನವನ್ನು ತಡೆ ಹಿಡಿಯಲಾಗಿತ್ತು. ಅಂತಿಮ ವೇತನ ಪ್ರಮಾಣ ಪತ್ರ, ಸೇವಾವಹಿಯನ್ನು ಕಳುಹಿಸದ ಕಾರಣ ಕಳೆದ 6 ತಿಂಗಳಿಂದ ಇವರಿಗೆ ವೇತನ ನೀಡಲಾಗಿರಲಿಲ್ಲ. ಇದರಿಂದ ನೊಂದಿದ್ದ ಪ್ರಭಾಕರ್ ತಮ್ಮ ಸರ್ಕಾರಿ ನೌಕರರ ರಾಜ್ಯ ಕಾರ್ಯಕಾರಿಣಿಯ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಒಂದು ಮೆಸೇಜ್ ಹಾಕಿ ನಾಪತ್ತೆಯಾಗಿದ್ದಾರೆ.
ನೌಕರರ ಗ್ರೂಪ್ನಲ್ಲಿ ಮೆಸೇಜ್ ಹಾಕಿದ ನೌಕರ: "ಆತ್ಮೀಯ ರಾಜ್ಯದ ಸಮಸ್ತ NPS ನೌಕರ ಸಂಘದ ಪದಾಧಿಕಾರಿ ಮಿತ್ರರೇ, ನಾನು ಕಳೆದ ಹತ್ತು ವರ್ಷಗಳಿಂದ NPS ನೌಕರ ಸಂಘವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ರಾಜ್ಯ ಸಂಘದ ನಿರ್ಧೇಶನದಂತೆ ಅನೇಕ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದ್ದೇನೆ".
"ಆದರೆ ಇತ್ತೀಚೆಗೆ ಜನವರಿ 22-2023ರಂದು ಶಿವಮೊಗ್ಗ ಜಿಲ್ಲಾ ಮಟ್ಟದ NPS ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರ ಫಲವಾಗಿ ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಾದ ಷಡಾಕ್ಷರಿ, ಅವರ ಸಹಚರರಾದ ಮೋಹನ್ ಕುಮಾರ ಆರ್, ಬಸವನಗೌಡ , ಹಾಗೂ ಹಿಂದಿನ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಮತ್ತು ಅವರ ಆಪ್ತ ಕಾರ್ಯದರ್ಶಿಗಳಾಗಿದ್ದ ಎ.ಆರ್.ರವಿ ಅವರು ವ್ಯವಸ್ಥಿತ ಪಿತೂರಿ ನಡೆಸಿ ಹಿಂಬಡ್ತಿ ಮಾಡಿದ್ದಾರೆ".
"ಅಲ್ಲದೆ ನಿಯಮಗಳಲ್ಲಿ ವೇತನ ಸಂರಕ್ಷಣೆಗೆ ಅವಕಾಶವಿದ್ದರೂ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಶ್ರೀ ಮಹಂತಯ್ಯ ಹೊಸಮಠ ಅವರು ಹಿಂಬಡ್ತಿ ಮಾಡಿದ್ದಲ್ಲದೆ, ಹೆಚ್ಚುವರಿ ವೇತನ ಕಟಾಯಿಸುವಂತೆ ಆದೇಶ ಮಾಡಿದ್ದಾರೆ. ಇದರಿಂದಾಗಿ ಹೊನ್ನಾಳಿ BEO ನಂಜರಾಜ ಅವರು ಸರಿಯಾದ ಸಮಯಕ್ಕೆ ಅಂತಿಮ ವೇತನ ಪ್ರಮಾಣ ಪತ್ರ, ಸೇವಾವಹಿಯನ್ನು ಕಳುಹಿಸಿಲ್ಲ. ಇದಿರಂದಾಗಿ ಕಳೆದ 6 ತಿಂಗಳಿಂದ ವೇತನ ಆಗದೆ ನರಕಯಾತನೆ ಅನುಭವಿಸಿದ್ದೇನೆ".