ಶಿವಮೊಗ್ಗದ: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಜಿಲ್ಲಾ ಪಶು ವೈದ್ಯಸೇವಾ ಇಲಾಖೆ ನಡುವೆ ಹೊಂದಾಣಿಕೆ ಇಲ್ಲದೆ ಜಟಾಪಟಿ ನಡೆಸುತ್ತಿವೆ.
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿನ ಗೆಸ್ಟ್ ಹೌಸ್ ಅನ್ನು ಪಶು ಸಂಗೋಪನಾ ಇಲಾಖೆಯ ಶಿವಮೊಗ್ಗ ಸಹಾಯಕ ನಿರ್ದೇಶಕರ ಕಚೇರಿಗೆ ನೀಡಲಾಗಿತ್ತು. ಸದ್ಯ ನಮ್ಮ ವ್ಯಾಪ್ತಿಯ ಕಟ್ಟಡವನ್ನ ಖಾಲಿ ಮಾಡಿ ಇಲ್ಲವೆ, ಕಟ್ಟಡಕ್ಕೆ ಬಾಡಿಗೆ ನೀಡಿ ಎಂದು ಎಪಿಎಂಸಿ ತಕರಾರು ತೆಗೆದಿದ್ದು, ಪಶು ಸಂಗೋಪನಾ ಇಲಾಖೆಗೆ ನೋಟಿಸ್ ನೀಡುತ್ತಿದೆ.
ಸ್ವಂತ ಜಾಗ ಕಳೆದುಕೊಂಡ ಪಶು ಸಂಗೋಪನಾ ಇಲಾಖೆ ಎಪಿಎಂಸಿ ಆವರಣದ ಕಟ್ಟಡದಲ್ಲಿ ಕಳೆದ 10 ವರ್ಷಗಳಿಂದ ಪಶು ಸಂಗೋಪನಾ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಎಪಿಎಂಸಿಯ ಗೆಸ್ಟ್ ಹೌಸ್ ಎದುರಿಗೆ ಪಶು ಆಸ್ಪತ್ರೆ ಹಾಗೂ ಪಶು ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಔಷಧಗಳನ್ನು ಸ್ಟಾಕ್ ಮಾಡುವ ಕೊಠಡಿ ಸೇರಿ ಒಟ್ಟು ಮೂರು ಕಟ್ಟಡಗಳಲ್ಲಿ ಪಶು ಸಂಗೋಪನಾ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಎಪಿಎಂಸಿ ಆವರಣದಲ್ಲಿ ಪಶು ಆಸ್ಪತ್ರೆಯಿಂದಾಗಿ ಸಾಕಷ್ಟು ಕಿರಿಕಿರಿ ಆಗುತ್ತಿದೆ. ಅಲ್ಲದೆ ಈಗ ಪಶು ಸಂಗೋಪನ ಇಲಾಖೆಗೆ ನೀಡುವ ಅತಿಥಿ ಗೃಹ ಎಪಿಎಂಸಿ ಕಾರ್ಯದರ್ಶಿ ರವರ ಅತಿಥಿ ಗೃಹವಾಗಿದೆ. ಕೇವಲ ಒಂದೆರಡು ವರ್ಷಗಳು ಅಂತ ಹೇಳಿ ಈಗ ಬರೋಬ್ಬರಿ 10 ವರ್ಷಗಳಾದ್ರೂ ಸಹ ಯಾವುದೇ ಬದಲಾವಣೆ ಬಾರದೆ ತಮ್ಮ ಕಟ್ಟಡ ಪಶು ಸಂಗೋಪನಾ ಇಲಾಖೆಗೆ ನೀಡಿದ್ದು ಎಪಿಎಂಸಿ ಸದಸ್ಯರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಇದರಿಂದ ಎಪಿಎಂಸಿಯ ಕಾರ್ಯದರ್ಶಿಗಳು ಗೆಸ್ಟ್ ಹೌಸ್ ಖಾಲಿ ಮಾಡಿಸುವಂತೆ ತಮ್ಮ ಕಚೇರಿಯ ಸಿಬ್ಬಂದಿಯನ್ನು ಕಳುಹಿಸಿದ್ದರು. ಅಲ್ಲದೆ ಕಾರ್ಪೆಂಟರ್ನ ಕಳುಹಿಸಿ ಗೆಸ್ಟ್ ಹೌಸ್ ಕಟ್ಟಡದ ಬಾಗಿಲಿಗೆ ಹೊಸ ಚಿಲಕವನ್ನು ಹಾಕಿಸಿದ್ದಾರೆ.
ಸ್ವಂತ ಜಾಗ ಕಳೆದುಕೊಂಡ ಪಶು ಸಂಗೋಪನಾ ಇಲಾಖೆ:
ಸಚಿವ ಈಶ್ವರಪ್ಪನವರ ಕಚೇರಿಯ ಜಾಗ ಹಿಂದೆ ಪಶು ಸಂಗೋಪನಾ ಇಲಾಖೆಗೆ ಸೇರಿದ ಜಾಗವಾಗಿತ್ತು. ಈ ಜಾಗದಲ್ಲಿ ಉತ್ತಮ ಕಟ್ಟಡವನ್ನು ಕಟ್ಟಲಾಗುವುದು ಎಂದು 2009 ರಲ್ಲಿ ಪಶು ಇಲಾಖೆಯ ಜಾಗವನ್ನು ಪಾಲಿಕೆ ವಶಕ್ಕೆ ಪಡೆದಿತ್ತು. ನಂತರ ಇಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಕಟ್ಟಲಾಯಿತು. ಬಳಿಕ ಇಲ್ಲಿ ಶಾಸಕರುಗಳ ಕಚೇರಿ, ಸ್ಮಾರ್ಟ್ ಸಿಟಿ ಕಚೇರಿ ಹಾಗೂ ಪಶು ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಜಾಗ ನೀಡಲಾಗಿದೆ. ಆದರೆ, ಹಿಂದಿನಂತೆ ಪಶು ಆಸ್ಪತ್ರೆಗಾಗಲಿ, ಸಹಾಯಕ ನಿರ್ದೇಶಕರ ಕಚೇರಿಗಾಗಲಿ ಜಾಗ ನೀಡಿಲ್ಲ. ಪಶು ಇಲಾಖೆಗೆ ಈ ಜಾಗವನ್ನು ದಾನಿಗಳೊಬ್ಬರು ದಾನ ನೀಡಿದ್ದರು. ಇಂತಹ ಜಾಗ ಕಳೆದುಕೊಂಡ ಆಸ್ಪತ್ರೆ ಈಗ ಎಪಿಎಂಸಿಯಿಂದಲೂ ಎತ್ತಂಗಡಿ ಆಗುವ ಆತಂಕದಲ್ಲಿದೆ. ಸದ್ಯ ಎರಡು ಇಲಾಖೆಗಳ ಜಟಾಪಟಿಯ ಚೆಂಡು ಜಿಲ್ಲಾಧಿಕಾರಿ ಅವರ ಕೋರ್ಟ್ನಲ್ಲಿದೆ. ಇದಕ್ಕೆ ಡಿಸಿ ಸೂಕ್ತ ಪರಿಹಾರ ನೀಡಿದರೆ ಮಾತ್ರ ಪಶು ಅಸ್ಪತ್ರೆ ಹಾಗೂ ಇಲಾಖೆ ಉಳಿಯುತ್ತದೆ.