ಶಿವಮೊಗ್ಗ: ಸೋರುತ್ತಿದ್ದ ಕೋಡೂರು ಶಾಲೆಗೆ ಹೊಸನಗರ ಬಿಇಓ ಕೃಷ್ಣಮೂರ್ತಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ಸರ್ಕಾರಿ ಶಾಲೆಯು ಸುಮಾರು 40 ವರ್ಷದ ಹಳೆಯದ್ದು. ಶಾಲೆಯ ಮೇಲ್ಛಾವಣಿ ಹಂಚಿನಿಂದ ನಿರ್ಮಾಣವಾಗಿದೆ. ಹೊಸನಗರ ಭಾಗದಲ್ಲಿ ವಿಪರೀತ ಮಳೆ. ಇದರಿಂದ ಇಲ್ಲಿನ ಮೇಲ್ಛಾವಣಿಗಳು ಬೇಗನೇ ಹಳಾಗುತ್ತವೆ. ಆದರೆ, ಹಳಾದ ಮೇಲ್ಛಾವಣಿ ಸರಿಪಡಿಸುವ ಕಾರ್ಯವನ್ನು ನಿಧಾನವಾಗಿ ಮಾಡುವ ಪರಿಣಾಮ ಶಾಲೆಗಳು ಅಲ್ಲಲ್ಲಿ ಸೋರುತ್ತವೆ. ಅದೇ ರೀತಿ ಕೋಡೂರಿನ ಸರ್ಕಾರಿ ಪ್ರೌಢಶಾಲೆಯ ಕಾರಿಡಾರ್ ಮಳೆ ನೀರಿಗೆ ಸೂರುತ್ತಿದೆ. ಅಲ್ಲದೆ 9ನೇ ತರಗತಿಯಲ್ಲಿ ಹಂಚುಗಳು ಗಾಳಿ ಮಳೆಗೆ ಜರುಗಿದ ಪರಿಣಾಮ ತರಗತಿಯಲ್ಲಿ ಮಳೆ ನೀರಿನ ಸಣ್ಣ ಸಣ್ಣ ಹನಿಗಳು ಬೀಳುತ್ತಿದ್ದವು.
ಈ ವಿಚಾರ ತಿಳಿದ ಹೊಸನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಅವರು ಶಾಲೆಗೆ ಭೇಟಿ ನೀಡಿ ಶಾಲೆಯ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಶಾಲೆಯ ಪರಿಸ್ಥಿತಿಯ ಬಗ್ಗೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಪೋಷಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಶಾಲೆಯ ಕಾರಿಡಾರ್ನಲ್ಲಿ ಮಳೆ ಹನಿ ಸೋರುತ್ತಿರುವುದು ಗಮನಕ್ಕೆ ಬಂದಿದೆ. ಕಾರಿಡಾರ್ನ ಮೇಲ್ಛಾವಣಿಯಲ್ಲಿ ಹಂಚಿನ ಕೆಳಗೆ ಇರುವ ಮರದ ತುಂಡುಗಳ ನಡುವೆ ಸಂದಿ ಉಂಟಾಗಿದೆ. ಇದರಿಂದ ನೀರು ಕೆಳಗೆ ಸುರಿಯುತ್ತಿದೆ.
ಇನ್ನೂ ತರಗತಿಯ ಒಳಗೆ ಛತ್ರಿ ಹಿಡಿದುಕೊಂಡು ಕೂರುವಷ್ಟು ಸಮಸ್ಯೆ ಇಲ್ಲ. ಮಳೆ ಜೋರಾಗಿ ಬಂದಾಗ ಮಳೆಯ ಹನಿಗಳು ಸಿಡಿಯುತ್ತಿವೆ. ಇದರಿಂದ ಛತ್ರಿ ಹಿಡಿದುಕೊಂಡು ಕುಳಿತು ಕೊಳ್ಳುವಷ್ಟು ಸಮಸ್ಯೆ ಇಲ್ಲದಂತಾಗಿದೆ. ಈ ಕುರಿತ ವರದಿಯನ್ನು ಬಿಇಓ ಕೃಷ್ಣಮೂರ್ತಿ ಅವರು ಸೋಮವಾರ ಡಿಡಿಪಿಐ ಅವರಿಗೆ ಕೋಡೂರು ಶಾಲೆಯ ವರದಿಯನ್ನು ಸಲ್ಲಿಸುತ್ತಿದ್ದಾರೆ. ಇನ್ನೂ ಶಾಲೆಯ ದುರಸ್ತಿತಿಗೆ ಶಿಕ್ಷಣ ಇಲಾಖೆಯಿಂದ ಹೊಸನಗರ ತಾಲೂಕು ಆಡಳಿತದ ಹೆಡ್ಗೆ 3 ಲಕ್ಷ ರೂ ಬಿಡುಗಡೆಯಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತಯೇ ದುರಸ್ತಿ ಕಾರ್ಯ ನಡೆಯಲಿದೆ ಎಂದು ಬಿಇಓ ಕೃಷ್ಣಮೂರ್ತಿ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.