ಶಿವಮೊಗ್ಗ:ಶರಾವತಿ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ಇಲ್ಲಿನ ನಿವಾಸಿಗಳಾದ ಸೀತಾರಾಮ್ ಮತ್ತು ಲಲಿತಮ್ಮ ಕುಟುಂಬ ಜಿಲ್ಲಾಧಿಕಾರಿ ಕಚೇರಿ ಮುಂದೆ ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಮಗೆ ಭೂಮಿ ಕೊಡದಿದ್ದರೆ ಇಲ್ಲೇ ವಿಷ ಕುಡಿಯುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಶರಾವತಿ ಮುಳುಗಡೆ ಸಂತ್ರಸ್ತರ ಅಳಲು ಏಳು ದಶಕ ಕಳೆದರೂ ಮುಗಿಯದ ಮುಳುಗಡೆ ಸಂತ್ರಸ್ತರ ಬವಣೆ:
ಅರವತ್ತರ ದಶಕದಲ್ಲಿ ನಗರ ಹೋಬಳಿ, ಕಡಸೆ ಗ್ರಾಮದಿಂದ ಶರಾವತಿ ಮುಳುಗಡೆ ಸಂತ್ರಸ್ತರಾಗಿಸೀತಾರಾಮ್ ಮತ್ತು ಲಲಿತಮ್ಮ ಕುಟುಂಬ ಇಂದು ಭದ್ರಾವತಿ ತಾಲೂಕಿನ ಕಂಚೇನಹಳ್ಳಿಯಲ್ಲಿ ಬಂದು ನೆಲೆಸಿದೆ. ಅಂದು 7 ಏಕರೆ ಜಮೀನಿಗೆ ಖಾತೆದಾರರಾಗಿದ್ದ ಈ ಕುಟುಂಬ ನಂತರ ಪರ್ಯಾಯವಾಗಿ 3.5 ಎಕರೆ ಜಮೀನನ್ನು ಭದ್ರಾವತಿ ಕಂಚೇನಹಳ್ಳಿ ಬಳಿ ಪಡೆದಿತ್ತು.
ಸರ್ಕಾರದಿಂದ ಪರ್ಯಾಯ ಜಮೀನು ಸಿಕ್ಕರೂ ಲಲಿತಮ್ಮನವರಿಗೆ ನೆರೆಹೊರೆಯವರ ತೊಂದರೆ ಶುರುವಾಯ್ತಂತೆ. ಈ ಬಗ್ಗೆ ಅವರು ಅಂದಿನ ಭದ್ರಾವತಿ ತಹಶಿಲ್ದಾರ್ ನಾಗರಾಜ್ ಬಳಿ ದೂರು ನೀಡಿದ್ದಾರೆ. ಆಗ ನಾಗರಾಜ್ ಎಮ್ಮೆದೊಡ್ಡಿ ಬಳಿ ಪರ್ಯಾಯ ಭೂಮಿ ಮಂಜೂರು ಮಾಡಿ ಹಕ್ಕುಪತ್ರವನ್ನೂ ನೀಡಿದ್ದರು. ಆದರೆ ತಹಶಿಲ್ದಾರ್ ನೀಡಿದ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತೆ ಎಂದು ಅರಣ್ಯಾಧಿಕಾರಿಗಳು ಜಮೀನಿಗೆ ಬೇಲಿ ಹಾಕಿದ್ದಾರೆ. ಹೀಗಾಗಿ ಲಲಿತಮ್ಮ ಕುಟುಂಬ ಮತ್ತಷ್ಟು ಹೈರಾಣಾಗಿದ್ದು ಬೀದಿಗೆ ಬಂದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ನಮಗೆ ಯಾರಿಂದಲೂ ನ್ಯಾಯ ಸಿಗುತ್ತಿಲ್ಲ. ಈ ಬಾರಿಯಾದ್ರೂ ಜಿಲ್ಲಾಡಳಿತ ಮಾನವೀಯತೆಯಡಿ ನಮಗೆ ಸಿಗಬೇಕಾದ ಜಮೀನು ಕೊಡಿಸಲು ಮಧ್ಯಪ್ರವೇಶಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರಾಣ ಹೋಗುವವರೆಗೂ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪುತ್ರ ಮಹೇಶ್ ಎಚ್ಚರಿಕೆ ಕೊಟ್ಟಿದ್ದಾರೆ.