ಶಿವಮೊಗ್ಗ: ಮೂರು ದಿನಗಳ ಹಿಂದೆ ನಗರದ ಟಿಪ್ಪುನಗರ ನಿವಾಸಿ ಇರ್ಫಾನ್ (28) ಎಂಬಾತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯಿಂದ ಇಡೀ ಶಿವಮೊಗ್ಗ ಜನರು ಬೆಚ್ಚಿಬಿದ್ದಿದ್ದರು. ಕೊಲೆ ಮಾಡಿ ಶವವನ್ನ ಚರಂಡಿಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಬಂಧನದ ಬಳಿಕ ಈ ಕೊಲೆಗೆ ಗಾಂಜಾ ಗ್ಯಾಂಗ್ವಾರ್ ಕಾರಣ ಎಂಬುದು ಬಯಲಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಲು ಕಾರಣವಾಗಿದೆ.
ಶಿವಮೊಗ್ಗ ಕೊಲೆಗೆ ಕಾರಣವಾಗಿದ್ದು ಗಾಂಜಾ ಗ್ಯಾಂಗ್ವಾರ್ ಕೊಲೆಗೆ ಕಾರಣವಾಗಿತ್ತು ಗಾಂಜಾ ವಾರ್
ಗಾಂಜಾ ಪೆಡ್ಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಆರಂಭಗೊಂಡ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆಯಾದ ಶಿವಮೊಗ್ಗ ಮಿಳ್ಳಘಟ್ಟದ ಇರ್ಫಾನ್ ಆರಂಭದಿಂದಲೂ ಗಾಂಜಾ ಪೆಡ್ಲಿಂಗ್ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಇವನ ವಿರೋಧಿ ಗ್ಯಾಂಗ್ ಲತೀಫ್ ಹಾಗೂ ಸಹಚರರು ಗಾಂಜಾ ಪೆಡ್ಲಿಂಗ್ನಲ್ಲಿ ತೊಡಗಿದ್ದರು.
ಹೀಗಾಗಿ ಇರ್ಫಾನ್ ಹಾಗೂ ಲತೀಫ್ ಗ್ಯಾಂಗ್ಗೆ ಆಗುತ್ತಿರಲಿಲ್ಲ. ಗಾಂಜಾ ಪೆಡ್ಲಿಂಗ್ ವಿಚಾರವಾಗಿ ಹಿಂದೆಯೂ ಹತ್ತು ಹಲವು ಬಾರಿ ಈ ಎರಡು ಗ್ಯಾಂಗ್ ನಡುವೆ ಗಲಾಟೆಯಾಗಿತ್ತು. ಶನಿವಾರ ರಾತ್ರಿಯೂ ಇರ್ಫಾನ್ ಗ್ಯಾಂಗ್ನ ಅಸಾದಿ ಹಾಗೂ ಲತೀಫ್ ಗ್ಯಾಂಗ್ ನಡುವೆ ಟಿಪ್ಪು ನಗರದ 7ನೇ ತಿರುವಿನಲ್ಲಿ ಗಲಾಟೆಯಾಗಿತ್ತು. ಆಗ ಅಸಾದಿ, ಇರ್ಫಾನ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ಅವನೇ ತಂದಿದ್ದ ಚಾಕುವಿನಿಂದ ಹತ್ಯೆ
ಕೂಡಲೇ ಇರ್ಫಾನ್ ಚಾಕು ತೆಗೆದುಕೊಂಡು ಲತೀಫ್ನನ್ನು ಹೆದರಿಸುವ ಉದ್ದೇಶದಿಂದ ಟಿಪ್ಪು ನಗರಕ್ಕೆ ತೆರಳಿದ್ದಾನೆ. ಆಗ ಎರಡೂ ಗ್ಯಾಂಗ್ ನಡುವೆ ಮಾತಿನ ಚಕಮಕಿ ನಡೆದಿದೆ. ಇರ್ಫಾನ್ ತಾನು ತಂದಿದ್ದ ಚಾಕುವಿನಿಂದ ಲತೀಫ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಲತೀಫ್ ಹಾಗೂ ಆತನ ಸಹಚರರು ಇರ್ಫಾನ್ ತಂದಿದ್ದ ಚಾಕುವನ್ನು ಕಸಿದುಕೊಂಡು ಅದೇ ಚಾಕುವಿನಲ್ಲಿ ಇರ್ಫಾನ್ ಎದೆಗೆ ಇರಿದಿದ್ದಾರೆ.
ಇರ್ಫಾನ್ ಉಸಿರು ನಿಲ್ಲಿಸುತ್ತಿದ್ದಂತೆ ಆತನ ಶವವನ್ನು ಅಲ್ಲಿಯೇ ಚರಂಡಿಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಈಗ ಲತೀಫ್ ಗ್ಯಾಂಗ್ನ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.