ಶಿವಮೊಗ್ಗ :ನಗರದ ಜಿಲ್ಲಾ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಯ ವಾರ್ಡ್ ಬಾಯ್ ಹಾಗೂ ಆತನ ಸ್ನೇಹಿತರು ಅಪ್ರಾಪ್ತೆಯ ಗ್ಯಾಂಗ್ ರೇಪ್ ಮಾಡಿರುವ ಘಟನೆ ಸಿಎಂ ತವರು ಜಿಲ್ಲೆಯಲ್ಲಿ ನಡೆದಿದೆ.
ಆನಾರೋಗ್ಯದಿಂದ ಬಳಲುತ್ತಿರುವ ಬಾಲಕಿ ತಾಯಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾಗಿ ಆಕೆ ಆಸ್ಪತ್ರೆಯಲ್ಲಿದ್ದ ತಾಯಿಯನ್ನು ನೋಡಿಕೊಳ್ಳುತ್ತಿದ್ದಳು. ಆಕೆಯ ಮೇಲೆ ಕಣ್ಣಿಟ್ಟಿದ್ದ ವಾರ್ಡ್ ಬಾಯ್ ಮನೋಜ್ ಮತ್ತು ಆತನ ಸ್ನೇಹಿತರು ಗ್ಯಾಂಗ್ ರೇಪ್ ಮಾಡಿದ್ದಾರೆ.
ನಿನ್ನೆ ಶಿವಮೊಗ್ಗದಲ್ಲಿ ಗಲಭೆ ಸಂಬಂಧ ನಿಷೇಧಾಜ್ಞೆ ಜಾರಿ ಇದ್ದ ಕಾರಣ ಹೋಟೆಲ್‌ಗಳು ಬಂದ್ ಆಗಿದ್ದವು. ಈ ಸಂದರ್ಭ ಬಳಸಿಕೊಂಡ ಮನೋಜ್ ಆಕೆಗೆ ಊಟ ಕೊಡಿಸುವುದಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಆನಂತರ ಮನೋಜ್ ಮತ್ತು ಆತನ ಮೂರು ಜನ ಸ್ನೇಹಿತರು ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ.
ಅಲ್ಲಿಂದ ವಾಪಸಾದ ಬಳಿಕ ಸಂತ್ರಸ್ತ ಬಾಲಕಿ ಈ ವಿಷಯವನ್ನು ತನ್ನ ತಾಯಿಗೆ ಹೇಳಿದ್ದಾಳೆ. ನಂತರ ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆಬಿಸಿದ್ದಾರೆ.