ಶಿವಮೊಗ್ಗ/ದಾವಣಗೆರೆ: ರಾಜ್ಯಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೆಲವರು ತಮ್ಮ ಮನೆಗಳಲ್ಲೂ ಗಣೇಶನ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಗೌರಿ ಗಣೇಶ ಹಬ್ಬದ ಹಿನ್ನೆಲೆ ಇಂದು ಮುಂಜಾನೆಯೇ ನಗರದ ವಿವಿಧ ದೇವಾಲಯಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಲಾಗಿತ್ತು. ತಾಯಿ ಗೌರಿಗೆ ಎಲ್ಲಾ ಮುತ್ತೈದೆಯರು ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
ಹಿಂದೂ ಮಹಾ ಮಂಡಲದಿಂದ ಗಣೇಶನ ಪ್ರತಿಷ್ಠಾಪನೆ :ನಗರದ ಕೋಟೆ ರಸ್ತೆಯಲ್ಲಿರುವ ಭೀಮೇಶ್ವರ ದೇವಾಲಯದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ನಗರದ ಕುಂಬಾರಗುಂಡಿಯ ಗಣೇಶ ಎಂಬವರ ಮನೆಯಿಂದ ಗಣಪತಿ ಮೂರ್ತಿಯನ್ನು ಸರಳವಾದ ಮೆರವಣಿಗೆಯ ಮೂಲಕ ಭೀಮೇಶ್ವರ ದೇವಾಲಯಕ್ಕೆ ತರಲಾಯಿತು. ನಂತರ ದೇವಾಲಯದಲ್ಲಿ ತಂದು ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಹಿಂದೂ ಮಹಾ ಮಂಡಳದ ಸಂಚಾಲಕ ಹಾಗೂ ಶಾಸಕ ಚನ್ನಬಸಪ್ಪ, ಪ್ರತಿ ವರ್ಷದಂತೆ ಈ ವರ್ಷ ಹಿಂದೂ ಮಹಾ ಮಂಡಳದಿಂದ ಗಣೇಶನನ್ನು ಪ್ರತಿಷ್ಠಾಪಿಸಿದ್ದೇವೆ. ಸೆಪ್ಟೆಂಬರ್ 28ರ ನಂತರ ಚತುರ್ಥಿಯಂದು ಗಣೇಶನ ರಾಜಬೀದಿ ಉತ್ಸವ ನಡೆಯಲಿದೆ. ರಾಜಬೀದಿಯಲ್ಲಿ ಗಣೇಶನ ಮೆರವಣಿಗೆ ಶಾಂತಿಯುತವಾಗಿ ಸಾಗಲಿದೆ. ರಾಜಬೀದಿ ಉತ್ಸವದ ಹಿಂದಿನ ದಿನ ಮಹಾ ಮಂಗಳಾರತಿ ನಡೆಯಲಿದ್ದು, ನಂತರ ಪ್ರಸಾದ ವಿನಿಯೋಗ ಜರುಗಲಿದೆ ಎಂದು ಹೇಳಿದರು.
ಗಣೇಶ ಮೂರ್ತಿ ಭರ್ಜರಿ ಮಾರಾಟ :ನಗರದ ಪ್ರಮುಖ ವೃತ್ತಗಳಲ್ಲಿ ಗಣೇಶ ಮೂರ್ತಿಯ ಮಾರಾಟ ಬಲು ಜೋರಾಗಿ ನಡೆಯಿತು. 500ರಿಂದ ಹಿಡಿದು 10 ಸಾವಿರ ಬೆಲೆ ಬಾಳುವ ಮೂರ್ತಿಗಳನ್ನು ಜನರು ಕೊಂಡುಕೊಂಡು ಹೋಗಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಜನರು ಹೂವು, ಹಣ್ಣು ಸೇರಿದಂತೆ ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.