ಶಿವಮೊಗ್ಗ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಹಿಳೆಯರ ಸಬಲೀಕರಣವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಇಲಾಖೆ ಅವಿರತ ಶ್ರಮವಹಿಸುತ್ತಿದೆ.
ಸರ್ಕಾರ ಮಹಿಳೆ- ಮಕ್ಕಳ ಕಲ್ಯಾಣಕ್ಕಾಗಿ ಜಾರಿ ಮಾಡಿರುವ ಕಾರ್ಯಕ್ರಮಗಳನ್ನು ಅವರಿಗೆ ತಲುಪಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೂಪಿಸುವ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸಲು, ಸೇವೆಯನ್ನು ತಲುಪಿಸಲು ಇಲಾಖಾ ಸಿಬ್ಬಂದಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಗಳ ಯೋಜನೆಗಳ ವಿವರ:
1) ಮಾತೃಪೂರ್ಣ ಯೋಜನೆ
2 ಮಾತೃ ವಂದನ ಯೋಜನೆ
3) ಪೋಷಣ್ ಅಭಿಯಾನ್
4) ಉದ್ಯೋಗಿನಿ
5) ಸ್ವನಿಧಿ
6) ಕಿರುಸಾಲ ಯೋಜನೆಗಳು.
*ಮಾತೃವಂದನಾ ಯೋಜನೆ: ಈ ಯೋಜನೆಯಡಿ ಗರ್ಭಿಣಿಯರಿಗೆ 5 ಸಾವಿರ ರೂ. ಹಣ ನೀಡಲಾಗುತ್ತಿದ್ದು, ಗರ್ಭಿಣಿಯರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ಜೊತೆಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. 8,590 ಮಹಿಳೆಯರಿಗೆ 2 ಕೋಟಿ 30 ಲಕ್ಷ ರೂ. ಹಣ ಜಮೆ ಮಾಡಲಾಗಿದೆ.
*ಮಾತೃಪೂರ್ಣ ಯೋಜನೆ: ಮಾತೃಪೂರ್ಣ ಯೋಜನೆಯ ಫಲಾನುಭವಿಗಳೆಂದರೆ, ಗರ್ಭಿಣಿಯರು ಹಾಗೂ ಬಾಣಂತಿಯರು. ಭವಿಷ್ಯದ ಪ್ರಜೆಗಳನ್ನು ಪಡೆಯುವ ಸಲುವಾಗಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರಗಳನ್ನು ಇಲಾಖೆಯು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ತಲುಪಿಸುತ್ತದೆ. ಗರ್ಭಿಣಿ ಸ್ತ್ರೀಯರನ್ನು ಆಶಾ ಕಾರ್ಯಕರ್ತರು ಗುರುತಿಸಿ, ಸಮೀಪದ ಅಂಗನವಾಡಿಯಲ್ಲಿ ನೋಂದಾಯಿಸುತ್ತಾರೆ. ಇಲ್ಲಿ ನೋಂದಾಯಿತರಾದ ಪ್ರತಿಯೊಬ್ಬರಿಗೂ ಹೆರಿಗೆ ಆಗುವವರೆಗೂ ಅಂಗನವಾಡಿ ಮೂಲಕ ಪ್ರತಿ ದಿನ 21 ರೂ. ನಂತೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. ಹೆರಿಗೆಯ ನಂತರ ಬಾಣಂತಿಯರಿಗೂ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಈ ವರ್ಷ 8.711 ಗರ್ಭಿಣಿಯರು ಹಾಗೂ 7.718 ಬಾಣಂತಿಯರು ಈ ಮಾತೃ ಪೂರ್ಣ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಗರ್ಭಿಣಿ ಹಾಗೂ ಮಹಿಳೆಯರಿಗೆ ಮೊದಲು ಅಂಗನವಾಡಿಯ ಮೂಲಕ ಮನೆಗೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ನಂತರ ಇದು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಆಹಾರವನ್ನು ತಯಾರಿಸಿ, ಅವರಿಗೆ ಸಮೀಪದ ಅಂಗನವಾಡಿಯಲ್ಲಿ ಊಟ ನೀಡಲಾಗುತ್ತಿತ್ತು. ಆದರೆ, ಕೊರೊನಾದಿಂದಾಗಿ ಫಲಾನುಭವಿಗಳ ಮನೆಗೆ ಆಹಾರವನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಈ ಯೋಜನೆ ಶೇ. 100 ರಷ್ಟು ಯಶಸ್ವಿಯಾಗಿದೆ.
*ಪೋಷಣ್ ಅಭಿಯಾನ:ಈ ಯೋಜನೆಯಡಿ ಜಿಲ್ಲೆಯಲ್ಲಿನ 2,439 ಅಂಗನವಾಡಿಯ ಮೂಲಕ ಗರ್ಭಿಣಿ, ಬಾಣಂತಿಯರಿಗೆ ಹಾಗೂ ಕಿಶೋರಿಯರಿಗೆ ಅಪೌಷ್ಠಿಕತೆಯನ್ನು ಕಡಿಮೆ ಮಾಡಲು ಸಾವಿರ ದಿನ ಅವರನ್ನು ನಿಗಾವಹಿಸಿ ಅವರಿಗೆ ಪೌಷ್ಠಿಕಯುಕ್ತ ಆಹಾರ ನೀಡಲಾಗುತ್ತದೆ. ಅಂಗನವಾಡಿಯಲ್ಲಿ ಗರ್ಭಿಣಿ ಹಾಗೂ ಬಾಣಂತಿ, ಕಿಶೋರಿಯರ ತೂಕ ಹಾಗೂ ಬೆಳವಣಿಗೆಯನ್ನು ಪ್ರತಿ ತಿಂಗಳು ಗಮನಿಸಿ ಅವರಿಗೆ ಪೌಷ್ಠಿಕ ಆಹಾರಗಳನ್ನು ನೀಡಲಾಗುತ್ತದೆ. ಇದರಿಂದ ಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
*ಉದ್ಯೋಗಿನಿ: ಮಹಿಳೆಯ ಅಭಿವೃದ್ದಿಗಾಗಿಯೇ, ಅವರ ಸ್ವಾವಲಂಬನೆಗಾಗಿ ಇರುವ ಯೋಜನೆಗಳಲ್ಲಿ ಮುಖ್ಯವಾದವುಗಳಲ್ಲಿ ಉದ್ಯೋಗಿನಿ ಯೋಜನೆಯು ಒಂದು. ಈ ಯೋಜನೆಯಲ್ಲಿ 18 ರಿಂದ 55 ವರ್ಷದ ಮಹಿಳೆಯರನ್ನು ಗುರುತಿಸಿ, ಅವರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಸಾಲದ ಮೊತ್ತ 3 ಲಕ್ಷ ರೂ. ಆಗಿರುತ್ತದೆ. ಇದರಲ್ಲಿ ಎಸ್ಸಿ ಜಾತಿಯವರಿಗೆ ಶೇ. 50 ರಷ್ಟು ರಿಯಾಯಿತಿ ಇದೆ. ಸಾಮಾನ್ಯದವರಿಗೆ ಶೇ. 30 ರಷ್ಟು ರಿಯಾಯಿತಿ ಇದೆ. ಈ ಮೂಲಕ ಮಹಿಳೆಯರು ತಮ್ಮ ಆರ್ಥಿಕ ಸ್ವಾವಲಬನೆ ಪಡೆಯಬಹುದಾಗಿದೆ.
*ಸ್ವನಿಧಿ ಯೋಜನೆ:ಇದು ಬೀದಿ ಬದಿ ಮಹಿಳಾ ವ್ಯಾಪಾರಿಗಳಿಗೆ ಇರುವಂತಹ ಯೋಜನೆಯಾಗಿದೆ. ಇದರಲ್ಲಿ 18 ರಿಂದ 60 ವರ್ಷದ ಮಹಿಳೆಯರಿಗೆ ಸಾಲ ನೀಡಲಾಗುತ್ತದೆ. ಕಿರುಸಾಲ ಯೋಜನೆಯಡಿ ಸ್ತ್ರೀ ಶಕ್ತಿ ಗುಂಪುಗಳಿಗೆ 2 ಲಕ್ಷದವರೆಗೂ ಸಾಲ ನೀಡಲಾಗುತ್ತದೆ.
*ಚೇತನ ಯೋಜನೆ:ಲೈಂಗಿಕ ಕಾರ್ಯಕರ್ತರ ಪುನರ್ ವಸತಿಗಾಗಿ 18-60 ವರ್ಷದವರಿಗೆ ನೋಂದಾಯಿತ ಸಂಸ್ಥೆಯ ಮೂಲಕ 50 ಸಾವಿರ ರೂ. ಸಾಲ ನೀಡಲಾಗುತ್ತದೆ.
*ಧನಶ್ರೀ ಯೋಜನೆ: ಈ ಯೋಜನೆಯಡಿ ಹೆಚ್ ಐ ವಿ ಬಾಧಿತ ಮಹಿಳೆಯರಿಗೆ ಸ್ವ- ಉದ್ಯೋಗಕ್ಕಾಗಿ 50 ಸಾವಿರ ರೂ. ನೇರ ಸಾಲ ನೀಡಲಾಗುತ್ತದೆ. ಈ ಸಾಲವನ್ನು ನೋಂದಾಯಿತ ಸಂಸ್ಥೆಯ ಮೂಲಕ ಸಾಲ ನೀಡಲಾಗುತ್ತದೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ 50 ಸಾವಿರರೂ ನೇರ ಸಾಲವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ನಿಗಮದ ಮೂಲಕ ನೀಡಲಾಗುತ್ತದೆ.
ಸಮಿತಿ:ಸಾಲ ಸೌಲಭ್ಯ ಯೋಜನೆಗಳ ಫಲಾನುಭವಿಗಳನ್ನು ಆಯಾ ತಾಲೂಕಿನ ಶಾಸಕರ ಸಮಿತಿಯವರು ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಸಿಡಿಪಿಒ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಶೀಲ್ದಾರ್ ಅವರು ಸದಸ್ಯರಾಗಿರುತ್ತಾರೆ. ಇವರ ಮೂಲಕ ಫಲಾನುಭವಿಗಳ ಆಯ್ಕೆ ಆಗುತ್ತದೆ. ಈ ಫಲಾನುಭವಿಗಳನ್ನು ಅನುದಾನದ ಹಂಚಿಕೆಯನ್ನು ನೋಡಿಕೊಂಡು ಆಯ್ಕೆ ಮಾಡಲಾಗುತ್ತದೆ.