ಶಿವಮೊಗ್ಗ: ನಗರದಲ್ಲಿ 2020ರ ಡಿಸೆಂಬರ್ನಲ್ಲಿ ನಡೆದ ಬಾಲಕಿಯ ಅತ್ಯಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರಿಗೆ ಶಿವಮೊಗ್ಗ ಜಿಲ್ಲಾ ಎರಡನೇ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದೆ. ಮನೋಜ್, ಪ್ರಜ್ವಲ್, ವಿನಯ್ ಹಾಗೂ ಪ್ರದೀಪ್ ಶಿಕ್ಷೆಗೊಳಗಾದ ಅಪರಾಧಿಗಳು.
ತಾಯಿಯ ಆರೈಕೆಗೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ:ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದ ಬಾಲಕಿಯ ಮೇಲೆ ನಾಲ್ವರು ಯುವಕರು ಅತ್ಯಾಚಾರ ನಡೆಸಿದ್ದರು. ಆಸ್ಪತ್ರೆಯಲ್ಲಿದ್ದ ತಾಯಿಯ ಆರೈಕೆಗೆ ಬಾಲಕಿ ಆಗಮಿಸಿದ್ದಳು. ಈ ವೇಳೆ, ಡಿಸೆಂಬರ್ 6 ರಂದು ತಾಯಿಗೆ ಊಟ ತರಲು ಆಸ್ಪತ್ರೆಯಿಂದ ಬಾಲಕಿ ಹೊರ ಬಂದಿದ್ದಳು. ಅಂದು ಶಿವಮೊಗ್ಗದಲ್ಲಿ ನಡೆದಿದ್ದ ಗಲಾಟೆಯಿಂದ ಸೆಕ್ಷನ್ 144 ಜಾರಿ ಮಾಡಲಾಗಿತ್ತು. ಇದರಿಂದ ಊಟಕ್ಕಾಗಿ ಹೊರ ಬಂದ ಬಾಲಕಿಯನ್ನು ನಾಲ್ವರು ಓಮ್ನಿ ಕಾರಿನಲ್ಲಿ ಬಂದು ನಗರದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ, ಅತ್ಯಾಚಾರ ಕೃತ್ಯ ಎಸಗಿದ್ದರು. ಬಳಿಕ ವಾಪಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದರು.
ಈ ವೇಳೆ, ಆಸ್ಪತ್ರೆಯ ಭದ್ರತಾ ಸಿಬ್ಬಂದಿಯು ಬಾಲಕಿಯನ್ನು ಯುವಕರು ಕರೆದುಕೊಂಡು ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಬಾಲಕಿಯ ವಿಚಾರಣೆ ನಡೆಸಿದಾಗ ನಾಲ್ವರು ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ ವಿಚಾರ ಬಹಿರಂಗವಾಗಿತ್ತು. ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಸಂಬಂಧ ಮನೋಜ್, ಪ್ರಜ್ವಲ್, ವಿನಯ್ ಹಾಗೂ ಪ್ರದೀಪ್ ಎಂಬುವರನ್ನು ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದರು. ಆ ಬಳಿಕ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಶಿವಮೊಗ್ಗದ ಎರಡನೇ ಪೋಕ್ಸೋ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದಿದ್ದು, ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು ಸಾಬೀತಾಗಿದೆ. ಈ ಹಿನ್ನೆಯಲ್ಲಿ ನ್ಯಾಯಾಧೀಶರಾದ ಮೋಹನ್ ಅವರು ನಾಲ್ವರಿಗೆ 20 ವರ್ಷ ಕಠಿಣ ಕಾರಾಗೃಹ ಹಾಗೂ ತಲಾ 1 ಲಕ್ಷ ರೂ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ವಿಫಲರಾದರೆ, ಹೆಚ್ಚುವರಿ 6 ತಿಂಗಳು ಶಿಕ್ಷೆ ವಿಧಿಸಿದ್ದಾರೆ. ನೊಂದ ಬಾಲಕಿಗೆ ಸರ್ಕಾರ 4 ಲಕ್ಷ ರೂ ಪರಿಹಾರ ನೀಡುವಂತೆ ಸೂಚಿಸಿದೆ. ಸರ್ಕಾರಿ ವಕೀಲರಾದ ಹರಿಪ್ರಸಾದ್ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ: ಗೋಕಾಕ್ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಬೆಳಗಾವಿ ಎಸ್ಪಿ ಹೇಳಿದ್ದೇನು?