ಶಿವಮೊಗ್ಗ: ಭದ್ರಾವತಿ ತಾಲೂಕಿನ ವಿಐಎಸ್ಎಲ್ ವಸತಿ ಬಡಾವಣೆಯ ಜನರಲ್ಲಿ ಭಯವನ್ನುಂಟು ಮಾಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಬುಧವಾರ ಬೆಳಗ್ಗೆ ವಸತಿ ಬಡಾವಣೆಯ ಬಳಿ ಮಹಿಳೆಯ ಮೇಲೆ ಎಗರಿ ಗಾಯಗೊಳಿಸಿದ್ದ ಚಿರತೆಯು, ನಂತರ ಅಲ್ಲಿಯೇ ಮನೆಗಳ ಹಿಂಭಾಗ ಅಡಗಿ ಕುಳಿತಿತ್ತು. ಸ್ಥಳಕ್ಕೆ ಬಂದ ಪೊಲೀಸ್ ಹಾಗೂ ಅರಣ್ಯ ಇಲಾಖೆಯವರು ಮೊದಲು ಚಿರತೆ ಎಲ್ಲೂ ಹೋಗದಂತೆ, ಅದರ ಬಳಿ ಜನ ಸೇರದಂತೆ ರಸ್ತೆಗಳಿಗೆ ಬ್ಯಾರಿಕೇಟ್ ಹಾಕಿದ್ದರು.
ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪಶು ವೈದ್ಯ ವಿನಯ್ ಅವರು ಸ್ಥಳಕ್ಕೆ ಆಗಮಿಸಿ, ಚಿರತೆ ಇರುವ ಜಾಗವನ್ನು ಗುರುತಿಸಿದರು. ಸುತ್ತ ಬಲೆಯನ್ನು ಹಾಕಿ ಚಿರತೆ ಎಲ್ಲೂ ಹೋಗದಂತೆ ಮಾಡಿದರು. ಬಳಿಕ ಅರವಳಿಕೆ ಚುಚ್ಚು ಮದ್ದನ್ನು ಗನ್ನಲ್ಲಿ ಡಾಟ್ ಮಾಡಿದರು. ಚಿರತೆ ಕ್ಷಣ ಮಾತ್ರದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿತು. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ಅದನ್ನು ಹಿಡಿದು ಬೋನಿಗೆ ಹಾಕಿದ್ದಾರೆ.