ಶಿವಮೊಗ್ಗ: ಸಚಿವ ಪ್ರಿಯಾಂಕ್ ಖರ್ಗೆ ಸದಾ ಸುದ್ದಿಯಾಗಲು ಹೇಳಿಕೆ ನೀಡುತ್ತಿರುತ್ತಾರೆ. ಅವರಿಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ. ಪ್ರಿಯಾಂಕ್ ಖರ್ಗೆ ಪೇಪರ್ ಬಾಕ್ಸ್ ನ್ಯೂಸ್ ನಾಯಕ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಭದ್ರಾವತಿ ಪಟ್ಟಣದಲ್ಲಿ ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಕಾರ್ಯಕರ್ತನನ್ನು ಭೇಟಿಯಾದ ನಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಗೂ ಸ್ವಾತಂತ್ರ್ಯ ಹೋರಾಟಗಾರರಿಗೂ ಏನು ಸಂಬಂಧ. ಮಲ್ಲಿಕಾರ್ಜುನ ಅವರು ಸ್ವಲ್ಪವಾದರೂ ದೇಶದ ಬಗ್ಗೆ ಮಾತನಾಡುತ್ತಾರೆ. ಬಾಯಿಗೆ ಬಂದಂತೆ ಮಾತನಾಡುವ ಪ್ರಿಯಾಂಕ್ ಖರ್ಗೆ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದರು.
ಪ್ರಿಯಾಂಕ ಖರ್ಗೆ ವೀರ ಸಾರ್ವಕರ್ ಅವರ ಭಾವಚಿತ್ರವನ್ನು ತೆಗೆದು ಹಾಕುವ ಕುರಿತು ಮಾತನಾಡುತ್ತಾರೆ. ಪೇಪರ್ನಲ್ಲಿ ಬಾಕ್ಸ್ ನ್ಯೂಸ್ ಬರುತ್ತದೆ ಎಂದು ಈ ರೀತಿ ಹೇಳಿಕೆ ನೀಡುತ್ತಾರೆ. ಸಾಧ್ಯವಾದರೆ ವೀರ ಸಾರ್ವಕರ್ ಪೋಟೊ ತೆಗೆಯಲಿ ಎಂದು ಸವಾಲು ಹಾಕಿದರು. ಹಿಂದೆ ವಿಧಾನಸಭೆಯಲ್ಲಿ ವೀರ ಸಾರ್ವಕರ್ ಭಾವಚಿತ್ರ ಹಾಕುವಾಗ ಬಾಯಿಯಲ್ಲಿ ಇವರು ಬೆಣ್ಣೆ ಇಟ್ಟುಕೊಂಡಿದ್ರಾ ಅಥವಾ ಮಣ್ಣು ಇಟ್ಟುಕೊಂಡಿದ್ರಾ. ಅಂದೇ ಯಾಕೆ ಇವರೆಲ್ಲಾ ವಿರೋಧ ಮಾಡಲಿಲ್ಲ.ಭಾವಚಿತ್ರ ಅನಾವರಣಕ್ಕೆ ಬಂದು ಸುಮ್ಮನೆ ನಿಂತಿದ್ರಲ್ಲಾ ಎಂದು ಕಿಡಿಕಾರಿದರು.
ಗೂಂಡಾ ರಾಜ್ಯವಾಗುತ್ತಿದೆ :ನಮ್ಮ ರಾಜ್ಯ ಗೂಂಡಾ ರಾಜ್ಯವಾಗುತ್ತಿದೆ ಎಂದು ನೋವಿನಿಂದ ಹೇಳುತ್ತಿದ್ದೇನೆ. ರಾಜಭವನಕ್ಕೆ ಬಾಂಬ್ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದೆ ಎಂದರೆ ಇದು ರಾಜ್ಯ ಸರ್ಕಾರದ ವೈಫಲ್ಯವಾಗಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದಾರೆ. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇವುಗಳ ತನಿಖೆಯನ್ನು ಎನ್ಐಎಗೆ ನೀಡಿದರೆ ಹೀಗೆಲ್ಲ ಆಗಲ್ಲ ಎಂದರು. ಇದೇ ವೇಳೆ, ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದರು.