ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ಶಿವಮೊಗ್ಗ: "ರಾಮಮಂದಿರ ವಿಚಾರದಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಭಯ ಕಾಂಗ್ರೆಸ್ ನವರಿಗೆ ಕಾಡುತ್ತಿದೆ" ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಆಗುತ್ತಿರುವುದು ವಿಶ್ವದ ಜನರ ಗಮನ ಸೆಳೆಯುತ್ತಿದೆ. ದೇಶ ಮತ್ತು ವಿದೇಶಗಳಿಂದ ಅಂದು ಜನ ಬರುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಒಂದು ರೀತಿ ಅಸಮಾಧಾನ, ಅತೃಪ್ತಿ ಇದೆ. ಇದರಿಂದ ಸಂಪೂರ್ಣವಾಗಿ ಬಿಜೆಪಿಗೆ ಅನುಕೂಲವಾಗುವ ವಾತಾವರಣ ಇದೆ ಎಂಬ ಭಯ ಕಾಂಗ್ರೆಸ್ ನವರಿಗೆ ಕಾಡುತ್ತಿದೆ" ಎಂದು ಹೇಳಿದರು.
"ಇದರಲ್ಲಿ ರಾಜಕೀಯ ಏನಿಲ್ಲ. ಎಲ್ಲ ಪಕ್ಷದವರು ಬಂದು ಭಾಗವಹಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆ. ಇಂದಿನಿಂದ ಜನವರಿ 22ರ ವರೆಗೂ ಪ್ರಧಾನ ಮಂತ್ರಿ ಅವರು ಉಪವಾಸವಿದ್ದು, ತಮ್ಮದೇ ಆದ ಕೆಲಸ ಮಾಡಲು ಪ್ರಧಾನಿ ಅವರು ಸಿದ್ಧರಾಗುತ್ತಿರುವ ಸಂದರ್ಭದಲ್ಲಿ ಈಗಲಾದರೂ ಕಾಂಗ್ರೆಸ್ ನವರಿಗೆ ಸದ್ಬುದ್ಧಿ ಬಂದು, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡಲಿ. ಇಲ್ಲದಿದ್ದರೆ ಜನ ಅವರ ನಡುವಳಿಕೆಯನ್ನು ಸಹಿಸುವುದಿಲ್ಲ. ರಾಮಮಂದಿರ ಉದ್ಘಾನೆಯಾದ ಬಳಿಕ ಹೋಗುತ್ತೇವೆ ಎಂದು ಹೇಳಿದ್ದಾರೆ. ಈಗ ಹೋಗಿ ಬಂದರೆ ಅನುಕೂಲವಾಗುತ್ತದೆ. ಆದರೆ ಇದು ಅವರಿಗೆ ಬಿಟ್ಟ ವಿಚಾರ" ಎಂದರು.
ದಿನಕ್ಕೆ ಎರಡು ಜಿಲ್ಲೆಗಳ ಪ್ರವಾಸ ಮಾಡುವೆ: ಲೋಕಸಭಾ ಚುನಾವಣೆ ಕುರಿತು ಪ್ರತಿಕ್ರಿಯಿಸಿ, "ಲೋಕಸಭಾ ಚುನಾವಣಾ ದೃಷ್ಟಿಯಿಂದ ಪ್ರವಾಸ ಪ್ರಾರಂಭವಾಗಿದೆ. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಎಲ್ಲೆಡೆ ಅವರಿಗೆ ಭವ್ಯ ಸ್ವಾಗತ ಸಿಗುತ್ತಿದೆ. ನಾನು ಸಹ ಮೂರ್ನಾಲ್ಕು ದಿನ ಆದ ಮೇಲೆ ಲೋಕಸಭಾ ಚುನಾವಣಾ ದೃಷ್ಟಿಯಿಂದ ದಿನಕ್ಕೆ ಎರಡು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಅಭ್ಯರ್ಥಿಗಳ ಆಯ್ಕೆಯನ್ನು ಕೇಂದ್ರದ ನಾಯಕರು, ಪಕ್ಷದ ಮುಖಂಡರು ಸೇರಿ ತೀರ್ಮಾನ ಮಾಡುತ್ತಾರೆ" ಎಂದು ಹೇಳಿದರು.
ಶಿವಮೊಗ್ಗದ ಹಳೇ ಜೈಲು ಆವರಣಕ್ಕೆ ನಿನ್ನೆ(ಶುಕ್ರವಾರ) ಸಿಎಂ ಸಿದ್ದರಾಮಯ್ಯ ಶರಣ ಅಲ್ಲಮ ಪ್ರಭು ಹೆಸರು ಇಡುವುದು ಸೂಕ್ತ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, "ನಾನು ಈ ಬಗ್ಗೆ ಟೀಕೆ. ಟಿಪ್ಪಣಿ ಮಾಡಲ್ಲ, ಯಾರೇ ಒಳ್ಳೆಯ ಕೆಲಸ ಮಾಡಿದರು ಅದನ್ನು ಸ್ವಾಗತಿಸುತ್ತೇನೆ" ಎಂದರು. ಪೇಜಾವರ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವುದು ಬೇಡ, ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಪ್ರಶ್ನೆ ಉದ್ಭವವಾಗಲ್ಲ. ಮುಸ್ಲಿಮರು ಸಹ ಪಾದಯಾತ್ರೆ ಮಾಡಿಕೊಂಡು ಅಯೋಧ್ಯೆಗೆ ಹೋಗುತ್ತಿದ್ದಾರೆ. ಈ ರೀತಿ ಎಲ್ಲಾ ವರ್ಗದವರು ಸಹ ಬೆಂಬಲ ಕೊಡುತ್ತಿದ್ದಾರೆ. ಇದರಿಂದ ರಾಮ ಎಲ್ಲರಿಗೂ ಬೇಕಾಗಿರುವವನು. ಭೇದಭಾವ ಮಾಡುವ ಹೇಳಿಕೆ ನೀಡಿದರೆ ಅದಕ್ಕೆ ಬೆಲೆ ಇರಲ್ಲ" ಎಂದು ಹೇಳಿದರು.
ಇದನ್ನೂ ಓದಿ:ಮಂದಿರ ಉದ್ಘಾಟನೆ ಆಹ್ವಾನಿತರಿಗೆ ರಾಮ ಜನ್ಮಭೂಮಿಯ ಪವಿತ್ರ ಮಣ್ಣು, ಸರಯೂ ನದಿ ತೀರ್ಥ