ಸೊರಬ (ಶಿವಮೊಗ್ಗ): ಇಂದು ನಾಡು ಕಂಡ ವರ್ಣರಂಜಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ 11ನೇ ಪುಣ್ಯಸ್ಮರಣೆ. ಇದರ ಅಂಗವಾಗಿ ಸೋಮವಾರ ಪಟ್ಟಣದ ಬಂಗಾರಧಾಮದಲ್ಲಿರುವ ಅವರ ಸಮಾಧಿಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಆಗಮಿಸಿ, ಪೂಜೆ ಸಲ್ಲಿಸಿದರು. ಅವರ ಜೊತೆ ಪಕ್ಷದ ಮುಖಂಡರು ಹಾಗೂ ಸಂಬಂಧಿಗಳು ಆಗಮಿಸಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಎಸ್ ಮಧುಬಂಗಾರಪ್ಪ ಮಾತನಾಡಿದರು. ಎಸ್ ಬಂಗಾರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಡವರ, ಹಿಂದುಳಿದ ವರ್ಗಗಳ, ರೈತರ ಪರವಾದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವು ಇಂದಿಗೂ ಸಹ ಜನಮಾನಸದಲ್ಲಿ ಉಳಿದಿವೆ. ಅವರ ಆದರ್ಶ ರಾಜಕೀಯವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಸದಾ ಜನ ಸೇವೆಯಲ್ಲಿ ತೊಡಗಿದ್ದೇನೆ ಎಂದು ತಿಳಿಸಿದರು.