ಶಿವಮೊಗ್ಗ:ಶಾಲೆಯಲ್ಲಿ ಆಹಾರ ಸೇವಿಸಿದ 30ಕ್ಕೂ ಅಧಿಕ ವಿದ್ಯಾರ್ಥಿಗಳು ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ಜೋಗದಲ್ಲಿ ನಡೆದಿದೆ. ಕ್ರಿಸ್ತ ಪ್ರಕಾಶ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಊಟ ಮಾಡಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ತಕ್ಷಣ ಎಲ್ಲರನ್ನೂ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಭಯಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ವಿವರ: ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಪೋಷಕರಿಲ್ಲದ ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ನೀಡಲಾಗುತ್ತಿದೆ. ಕೆಲವರು ಈ ಶಾಲೆಗೆ ಬಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಮಕ್ಕಳಿಗೆ ಊಟ ನೀಡುತ್ತಾರೆ. ಅಲ್ಲದೇ ಜೋಗ ಕಾರ್ಗಲ್ ಪಟ್ಟಣದಲ್ಲಿ ನಡೆವ ಸಭೆ ಸಮಾರಂಭದಲ್ಲಿ ಉಳಿದ ಊಟವನ್ನು ಶಾಲೆಗೆ ನೀಡಲಾಗುತ್ತಿತ್ತು.
ಅದೇ ರೀತಿ ಮೊನ್ನೆ ರಾತ್ರಿಯೂ ಶಾಲೆಗೆ ಹೊರಗಿನಿಂದ ಆಹಾರವನ್ನು ನೀಡಲಾಗಿದೆ. ವಸತಿ ಶಾಲೆಯ ಎಲ್ಲ ಮಕ್ಕಳು ಆಹಾರ ಸೇವಿಸಿದ್ದರು. ಮರುದಿನ ಬೆಳಿಗ್ಗೆ ಒಬ್ಬಳು ಹುಡುಗಿ ಹೊಟ್ಟೆ ನೋವು ಎಂದು ಹೇಳಿದ್ದು, ಕಾರ್ಗಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು. ಆ ಬಳಿಕ ಸಂಜೆಯ ಹೊತ್ತಿಗೆ ಮತ್ತಿಬ್ಬರು ವಿದ್ಯಾರ್ಥಿಗಳು ಹೊಟ್ಟೆ ನೋವು ಎಂದಿದ್ದಾರೆ. ಶಾಲೆಯ ಎಲ್ಲಾ ಮಕ್ಕಳನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ ವೈದ್ಯರು ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ.
ನೈಟ್ ಪಾರ್ಟಿಗೆ ವಿರೋಧ: ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಹೋಟೆಲ್ವೊಂದರಲ್ಲಿ ನಡೆಯುತ್ತಿದ್ದ ಲೇಡಿಸ್ ನೈಟ್ ಪಾರ್ಟಿಯನ್ನು ಬಜರಂಗದಳದ ಕಾರ್ಯಕರ್ತರು ಪೊಲೀಸರ ಮೂಲಕ ತಡೆದಿದ್ದಾರೆ. ಕಳೆದ ಶುಕ್ರವಾರ ರಾತ್ರಿ ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಲೇಡಿಸ್ ನೈಟ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಜರಂಗದಳ ಕಾರ್ಯಕರ್ತರು ಪೊಲೀಸರ ಮೂಲಕ ತಡೆದಿದ್ದರು.
ಇದನ್ನೂ ಓದಿ:ಶಿವಮೊಗ್ಗ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಳಿತ ಸಹಾಯಕ ಲೋಕಾಯುಕ್ತ ಬಲೆಗೆ..