ಶಿವಮೊಗ್ಗ :ಮಹಾನಗರ ಪಾಲಿಕೆ ವತಿಯಿಂದ ನಡೆದ ಆಹಾರ ದಸರಾ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‌ಗಾಗಿಯೇ ಆಹಾರ ತಯಾರಿಕೆಯ ಸ್ಪರ್ಧೆ ನಡೆಸಲಾಯಿತು. ನಗರದ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಆಹಾರ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೊರೊನಾ ಕಾಲಘಟ್ಟದಲ್ಲಿ ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸುವ ಸಲುವಾಗಿ ಶಾಲಾ ಶಿಕ್ಷಕಿಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ತಯಾರಿಸುವ ಸ್ಪರ್ಧೆ ನಡೆಸಲಾಯಿತು. ಮಹಾನಗರ ಪಾಲಿಕೆ ವತಿಯಿಂದ ಅಡುಗೆ ತಯಾರಕರಿಗೆ ಬೇಕಾದ ಗ್ಯಾಸ್ ಸ್ಟವ್ ಒದಗಿಸಲಾಗಿತ್ತು.
ಆಹಾರ ದಸರಾದಲ್ಲಿ ಬಗೆ ಬಗೆಯ ತಿಂಡಿ ತಯಾರಿಸಿದ ಕೊರೊನಾ ವಾರಿಯರ್ಸ್ ಅಡುಗೆ ತಯಾರು ಮಾಡಲು ಬೇಕಾದ ಎಲ್ಲಾ ಪರಿಕರಗಳನ್ನು ತಯಾರಕರೆ ತರಬೇಕಾಗಿತ್ತು. ಅದರಂತೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎಲ್ಲರು ಸಹ ತಮ್ಮ ತಮ್ಮ ಪರಿಕರಗಳನ್ನು ತಂದಿದ್ದರು. ಮೊದಲ ಸುತ್ತಿನಲ್ಲಿ ಶಿಕ್ಷಕಿಯರು ತಮ್ಮ ಅಡುಗೆಯ ಗಮ್ಮತ್ತನ್ನು ತೋರಿಸಿದರು.
ಅಡುಗೆ ತಯಾರು ಮಾಡಲು ಅರ್ಧ ಗಂಟೆ ಕಾಲಾವಕಾಶ ನೀಡಲಾಗಿತ್ತು. ಈ ಅರ್ಧಗಂಟೆಯ ಒಳಗೆ ಅಡುಗೆ ತಯಾರು ಮಾಡಿ ಮುಗಿಸಬೇಕಿತ್ತು. ಅದರಂತೆ ಶಿಕ್ಷಕಿಯರು ತಮಗೆ ನೀಡಿದ ಕಾಲಾವಕಾಶದಲ್ಲಿ ಅಡುಗೆ ಮಾಡಿದರು.
ಎಲ್ಲಾ ಶಿಕ್ಷಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಹ ಹೆಚ್ಚಾಗಿ ನಾಟಿ ಸ್ಟೈಲ್‌ನಲ್ಲಿ, ಗ್ರಾಮೀಣ ಸೂಗಡಿನ ಅಡುಗೆ ಮಾಡಿ ತೋರಿಸಿದರು. ಇದರಲ್ಲಿ ಮಲೆನಾಡಿನ ಕೆಸವಿನೆಲೆಯ ಒಡೆ, ಅರಿಶಿಣದಲೆಯ ಕಡಬು, ರಾಗಿ ರೊಟ್ಟಿ, ಕಾಯಿ ಚಟ್ನಿ, ಪನ್ನೀರ್, ಅವಲಕ್ಕಿ, ಕ್ಯಾರೇಟ್ ಹಲ್ವಾ ಸೇರಿ ಬಗೆ ಬಗೆಯ ತಿನಿಸುಗಳನ್ನು ತಯಾರು ಮಾಡಿ ತಮ್ಮ ಕೈಚಳಕ ತೋರಿಸಿದರು.
ತಯಾರಾದ ಅಡುಗೆಯನ್ನು ಜಡ್ಜ್ ಮಾಡಲು ಶಿವಮೊಗ್ಗದ ಪ್ರತಿಷ್ಠಿತ ಶುಭಂ ಹೋಟೆಲ್ನ ಉದಯ್ ಆಗಮಿಸಿದ್ದರು. ಅಲ್ಲದೆ, ಹರ್ಷ ದಿ ಫರ್ನ್ ನ ಚೆಫ್ ಸಹ ಆಗಮಿಸಿದ್ದರು. ಇದರಲ್ಲಿ ಶುಭಂ ಹೋಟೆಲ್ನ ಉದಯ್ ಅವರು ಪ್ರತಿಯೊಬ್ಬ ಸ್ಪರ್ಧಿಯ ತಿನಿಸನ್ನು ಸವಿದು ನೋಡಿ ಜಡ್ಜ್‌ಮೆಂಟ್ ನೀಡಿದರು. ಪ್ರತಿಸ್ಪರ್ಧಿಗೂ ಸಹ ಸಮಾಧಾನಕರ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ಸುನೀತ ಅಣ್ಣಪ್ಪ, ಆಯುಕ್ತ ಚಿದಾನಂದ ವಠಾರೆ, ಉಪಮೇಯರ್ ಶಂಕರ್ ಗನ್ನಿ, ಆಹಾರ ದಸರಾದ ಅಧ್ಯಕ್ಷೆ ಯಮುನಾ ರಂಗೇಗೌಡ ಸೇರಿ ಇತರರಿದ್ದರು. ಕೊರೊನಾದ ಸಮಯದಲ್ಲಿ ಶಿಕ್ಷಕಿಯರಿಗೆ ಈ ರೀತಿಯ ಸ್ಪರ್ಧೆ ನಡೆಸಿದ್ದು ನಮಗೆ ತುಂಬ ಖುಷಿಯಾಗಿದೆ. ಬಹುಮಾನ ಪಡೆಯುವುದಕ್ಕಿಂತ ಭಾಗವಹಿಸುವಿಕೆ ಮುಖ್ಯ ಎಂದರು ಶಿಕ್ಷಕಿಯರು.