ಸಂಸದ ಬಿ ವೈ ರಾಘವೇಂದ್ರ ಹೇಳಿಕೆ ಶಿವಮೊಗ್ಗ:ಭದ್ರಾವತಿಯ ಆಕಾಶವಾಣಿ ಕೇಂದ್ರಕ್ಕೆ ಎಫ್ ಎಂ ರೇಡಿಯೋ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಎಫ್ ಎಂ ರೇಡಿಯೋವನ್ನು ಶೀಘ್ರದಲ್ಲಿ ಪ್ರಾರಂಭ ಮಾಡಲಾಗುವುದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯ ಆಕಾಶವಾಣಿಗೆ ಎಫ್.ಎಂ ರೇಡಿಯೋ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದಂತೆ ಈಗ ತರಲಾಗುತ್ತಿದೆ. ಶಿವಮೊಗ್ಗದ ಚಿತ್ರಣವನ್ನು ಜಗತ್ತಿನ ಮುಂದಿಡಲು ಪ್ರಯತ್ನ ಮಾಡಲಾಗುತ್ತದೆ. ನಮ್ಮ ಕ್ಷೇತ್ರವನ್ನು ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಪರಿಚಯಿಸುವ ಪ್ರಯತ್ನ ಈ ಮೂಲಕ ಮಾಡಲಾಗುತ್ತಿದೆ ಎಂದರು.
ಮಲೆನಾಡಿಗೆ ಆದ್ಯತೆ ನೀಡಿ 10 ಕಿಲೋ ವ್ಯಾಟ್ ಟ್ರಾನ್ಸ್ಮೀಟರ್ ಅಳವಡಿಕೆಗೆ ಅವಕಾಶ ಕಲ್ಪಿಸಿದೆ. ಇದಕ್ಕೆ ಕೇಂದ್ರ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿದೆ. ಎಫ್.ಎಂ ರೇಡಿಯೋ ಕೇಂದ್ರಕ್ಕೆ ಅನುಮೋದನೆ ನೀಡಿದ ಕೇಂದ್ರದ ಸಚಿವರಿಗೆ ಅಭಿನಂದನೆಗಳು. ಹಾಲಿ ಭದ್ರಾವತಿಯ ಆಕಾಶವಾಣಿ ಕೇಂದ್ರದಲ್ಲಿ 1 ಕಿಲೋ ವ್ಯಾಟ್ ಇದೆ. ಅದನ್ನು 10 ಕಿಲೋ ವ್ಯಾಟ್ಗೆ ಪ್ರಸಾರ ಭಾರತಿ ಅವಕಾಶ ಮಾಡಿಕೊಟ್ಟಿದೆ.
ಟ್ರಾನ್ಸ್ಮೀಟರ್ನ್ನು ಶಿವಮೊಗ್ಗ ನಗರದ ವಿದ್ಯಾನಗರದ ದೂರದರ್ಶನ ಟವರ್ ಮೇಲೆ ಅಳವಡಿಸಲಾಗುತ್ತದೆ. ಇರುವಂತಹ ವ್ಯವಸ್ಥೆ ಬಳಸಿಕೊಂಡು ಟ್ರಾನ್ಸ್ಮೀಟರ್ ಅಳವಡಿಸಿಕೊಳ್ಳಲಾಗುತ್ತದೆ. ಭದ್ರಾವತಿ ಆಕಾಶವಾಣಿ ಕೇಂದ್ರ ಎಂದಿನಂತೆ ಹಾಗೆ ಇರುತ್ತದೆ. ಪ್ರಸಾರ, ರೆಕಾರ್ಡಿಂಗ್ ಎಲ್ಲವೂ ಭದ್ರಾವತಿಯಲ್ಲಿ ನಡೆಯಲಿದೆ. ಕೇಂದ್ರದ ಪ್ರಸಾರ ಭಾರತಿಯ ವರುಣ್ ತ್ರಿವೇದಿ ಅವರಿಗೆ ಮನವಿ ಮಾಡಲಾಗಿದೆ.
ಎಫ್ ಎಂ ರೇಡಿಯೋ ಟ್ರಾನ್ಸ್ ಮೀಟರ್ ಟೆಂಡರ್ನ್ನು ಡಿಸೆಂಬರ್ ಒಳಗೆ ಟೆಂಡರ್ ಕರೆಯಬೇಕಾಗಿ ವಿನಂತಿ ಮಾಡಿಕೊಂಡಿದ್ದೇವೆ. ಟೆಂಡರ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರೆದು ಅಳವಡಿಸಲಾಗುವುದು. ಈಗ ಸಿಬ್ಬಂದಿಗಳನ್ನು ನೇಮಕ ಮಾಡುವ ಕೆಲಸ ಆಗುತ್ತಿದೆ ಎಂದು ಸಂಸದರು ತಿಳಿಸಿದರು.
ಶೀಘ್ರದಲ್ಲಿಯೇ ವಿಮಾನ ಹಾರಾಟ: ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಸಚಿವ ಎಂ ಬಿ ಪಾಟೀಲ ಅವರು ಹೇಳಿಕೆ ನೀಡಿದ್ದಾರೆ. ನಮ್ಮ ಪ್ಲಾನಿಂಗ್ ಆಗಸ್ಟ್ 11 ಕ್ಕೆ ಆಪರೇಷನ್ ಮಾಡಬೇಕಿತ್ತು. ಆದರೆ ದಿಢೀರನೆ ಟೆಂಡರ್ ರದ್ದಾಗಿದೆ.
ಬಾಂಬ್ ಥ್ರೆಡ್ ಸ್ಕ್ವಾಡ್ ಅದೇ ವಿಮಾನ ನಿಲ್ದಾಣದಲ್ಲಿ ಇರಬೇಕೆಂದು ಕೇಂದ್ರ ನಿಯಮವಳಿ ಮಾಡಿದ ಪರಿಣಾಮ ಈಗ ವಿಮಾನ ಹಾರಾಟ ಮುಂದೆ ಹೋಗುವ ಸಾಧ್ಯತೆಗಳಿವೆ. ಬೇರೆ ವಿಮಾನ ನಿಲ್ದಾಣ ನಿಲ್ದಾಣಗಳಲ್ಲಿ ಈ ಸಿಸ್ಟಮ್ ಇಲ್ಲ. ಮುಂದಿನ ತಿಂಗಳ ಒಳಗೆ ಘೋಷಿಸಬೇಕೆಂದು ಇಂಡಿಗೋ ವಿಮಾನ ಸಂಸ್ಥೆಗೆ ಹೇಳಿ ಹಾರಾಟದ ಕುರಿತು ತಮ್ಮ ವೆಬ್ ಸೈಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಟೆಂಡರ್ ಕರೆದಾಗ ಶಿವಮೊಗ್ಗ- ತಿರುಪತಿ, ಶಿವಮೊಗ್ಗ- ಹೈದಾರಬಾದ್ ಹಾಗೂ ಶಿವಮೊಗ್ಗ- ಗೋವಾ ಮೂರು ಮಾರ್ಗಗಳಿಗೆ ಅನುಮೋದನೆಯಾಗಿದೆ.
ಸ್ಪೈಸ್ ಜೆಟ್, ಇಂಡಿಗೋ ಸ್ಟಾರ್ ಏರ್ಲೈನ್ಸ್ರವರು ಹಾರಾಟಕ್ಕೆ ಅಣಿಯಾಗಿದ್ದಾರೆ. ಮುಂಬೈಗೆ ಸಹ ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿದೆ. ಮಂಗಳವಾರ ಏರ್ ಲೈನ್ಸ್ ಮಿನಿಸ್ಟರ್ರನ್ನು ಭೇಟಿ ಮಾಡಲು ಅವಕಾಶ ನೀಡಿದ್ದಾರೆ. ರಸ್ತೆ ಮಾರ್ಗದ ಬಗ್ಗೆ ಸಚಿವ ನಿತೀನ್ ಗಡ್ಕರಿ ಅವರ ಜೊತೆ ಮಾತನಾಡಿದ್ದೇನೆ. ಕುಂಸಿ, ಹಾರನಹಳ್ಳಿಯಲ್ಲಿ ನಿಲುಗಡೆ ಕುರಿತು ರೈಲ್ವೆ ಸಚಿವರ ಜೊತೆ ಮಾತನಾಡಿದ್ದೇನೆ. ಮೊಬೈಲ್ ಟವರ್ನ್ನು ತರಲಾಗಿದೆ ಎಂದು ಮಾಹಿತಿ ನೀಡಿದರು.
ವಿಐಎಸ್ಎಲ್ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಗುತ್ತಿಗೆ ಕಾರ್ಮಿಕರಿಗೆ ತಿಂಗಳಪೂರ್ತಿ ಕೆಲಸ ಸಿಗಬೇಕೆಂದು ಪ್ರಯತ್ನ ಮಾಡಲಾಗುತ್ತಿದೆ. ನಾನು ಜನಪ್ರತಿನಿಧಿಯಾಗಿ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಖಾಸಗಿ ಹಾಗೂ ಸರ್ಕಾರ ಸೇರಿ ಮಾಡುವ ಪ್ರಯತ್ನಕ್ಕೆ ಯಾರು ಮುಂದೆ ಬಾರದೆ ಹೋದಾಗ ಮುಚ್ಚುವ ಹಂತಕ್ಕೆ ಬರಲಾಗುತ್ತಿದೆ. ಈ ವೇಳೆ ಶಾಸಕರಾದ ಚನ್ನಬಸಪ್ಪ, ರುದ್ರೇಗೌಡರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘರಾಜ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ ಟಿ ರವಿ ಬಿಡುಗಡೆ.. ರಾಜ್ಯಾಧ್ಯಕ್ಷ ಹೊಣೆ?