ಶಿವಮೊಗ್ಗ :ಶಿವಮೊಗ್ಗ ಹೊರವಲಯ ಬಿದಿರೆ ಗ್ರಾಮದಲ್ಲಿ ಸಾಯಿಬಾಬ ಗುಡಿಯಲ್ಲಿ ಕಾವಲುಗಾರನ ಮೇಲೆ ಹಲ್ಲೆ ನಡೆಸಿ, ಕಾಣಿಕೆ ಹುಂಡಿ ಕದ್ದು ಪರಾರಿಯಾಗಿದ್ದ ಐವರು ಖದೀಮರನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ದೇವಾಲಯದಲ್ಲಿ ದರೋಡೆ ನಡೆಸಿದ ಐವರು ಆರೋಪಿಗಳ ಬಂಧನ ಶಿವಮೊಗ್ಗ ತಾಲೂಕು ಬಿದರೆ ಗ್ರಾಮದ ಸಾಯಿಬಾಬ ದೇವಾಲಯದಲ್ಲಿ ನವೆಂಬರ್ 25 ರಂದು ಕಳ್ಳತನವಾಗಿತ್ತು. ಕಳ್ಳತನಕ್ಕೆ ಬಂದಿದ್ದ ಐವರು ದೇವಾಲಯದ ಕಾವಲುಗಾರರನ್ನು ಥಳಿಸಿ, ಕಂಬಕ್ಕೆ ಕಟ್ಟಿ ನಂತರ ಗುಡಿಯ ಒಳಗೆ ನುಗ್ಗಿ ಕಾಣಿಕೆ ಹುಂಡಿ ಒಡೆದು ಹಣ ತೆಗೆದುಕೊಂಡು ಹೋಗಿದ್ದರು.
ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮೊಹಮದ್ ಗೌಸ್(34), ಪ್ರೇಮನಾಥ(18) , ತೌಸೀಫ್ ಅಹಮದ್(30) ಹಾಗೂ ತಿಮ್ಮಯ್ಯ(58) ಎಂದು ಗುರುತಿಸಲಾಗಿದೆ.
ಮಹಮದ್ ಇಸ್ಮಾಯಿಲ್ (49) ಎಂಬವನನ್ನು ಸಕ್ರೆಬೈಲು ಬಳಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಹಮದ್ ತಾವೆಲ್ಲರೂ ಸೇರಿ ಕಳ್ಳತನ ಮಾಡಿದ್ದು ಹಾಗೂ ತನ್ನ ಸಹಚರರ ಹೆಸರನ್ನು ಬಾಯಿ ಬಿಟ್ಟಿದ್ದಾನೆ. ನಂತರ ಉಳಿದ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಂದು ನಾಡ ಪಿಸ್ತೂಲ್, 9 ಜೀವಂತ ಗುಂಡುಗಳು, 24,500 ಹಣ, ಕೃತ್ಯಕ್ಕೆ ಬಳಸಿದ ರೇನ್ ಕೊಟ್, ಜರ್ಕಿನ್ ಹಾಗೂ ಮಂಕಿಕ್ಯಾಪ್, ಕಬ್ಬಿಣದ ರಾಡು, ಆಕ್ಸೆಲ್ ಬ್ಲೇಡ್ಗಳ ಜೊತೆ ಒಂದು ಮಹೀಂದ್ರ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಳ್ಳತನ ನಡೆದ 10 ದಿನದೊಳಗೆ ಕಳ್ಳರನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಸಿಪಿಐ ಲೋಕೇಶ್, ಪಿಎಸ್ಐ ಮಂಜುನಾಥ ಕುಪ್ಪೆಲೂರು ಹಾಗೂ ಅವರ ತಂಡಕ್ಕೆ ಎಸ್ಪಿ ಶಾಂತರಾಜು ಅಭಿನಂದನೆ ಸಲ್ಲಿಸಿ, 20 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ.