ಶಿವಮೊಗ್ಗ: ಮಧ್ಯ ಕರ್ನಾಟಕದಲ್ಲಿ ಪ್ರಥಮ ಭಾರಿಗೆ ಹುಟ್ಟಿನಿಂದಲೇ ಬರುವ ಕಿವುಡುತನಕ್ಕೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ಐದಾರು ಜಿಲ್ಲೆಗಳಲ್ಲಿ ಉತ್ತಮ ಸೇವೆ ಒದಗಿಸುತ್ತಿರುವ ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನ ಬೋಧನಾಸ್ಪತ್ರೆಯಾದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಹುಟ್ಟಿನಿಂದಲೇ ಬರುವ ಕಿವುಡುತನಕ್ಕೆ ಅತ್ಯಾಧುನಿಕ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಇದೀಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ.
ಹುಟ್ಟಿನಿಂದಲೇ ಸಂಪೂರ್ಣ ಕಿವುಡಾದ ಮಕ್ಕಳಿಗೆ ಶ್ರವಣ ಸಾಧನಗಳು ಉಪಯೋಗಕ್ಕೆ ಬರುವುದಿಲ್ಲ. ಇಂತಹ ಮಕ್ಕಳಿಗೆ ವರದಾನವಾಗಿ ಕಾಕ್ಲಿಯರ್ ಇಂಪ್ಲಾಂಟ್ ಮಾಡಲಾಗುತ್ತದೆ. ಈ ಶಸ್ತ್ರಚಿಕಿತ್ಸೆ ದುಬಾರಿ. ಆದ್ದರಿಂದ ರಾಜ್ಯ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯಡಿ ಈ ಚಿಕಿತ್ಸೆಯನ್ನೂ ಸೇರಿಸಿದ್ದು, ಇದನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುತ್ತಿದೆ. ಪ್ರತಿ ಸಾವಿರ ಜನನ ಪ್ರಮಾಣಕ್ಕೆ ಎರಡು ಮಕ್ಕಳಿಗೆ ಹುಟ್ಟುವಾಗಲೇ ಕಿವುಡುತನ ಬಂದಿರುತ್ತದೆ.
ಇದರಲ್ಲಿ ಒಂದು ಮಗುವಿನ ಕಿವುಡುತನ ಅಲ್ಪ ಪ್ರಮಾಣದಲ್ಲಿದ್ದು, ಅದನ್ನು ವಿವಿಧ ಸುಲಭ ಚಿಕಿತ್ಸೆ, ಹಿಯರಿಂಗ್ ಏಡ್ ಅಥವಾ ಶ್ರವಣ ಸಾಧನಗಳನ್ನು ಬಳಸಿ ಪುನಶ್ಚೇತನಗೊಳಿಸಬಹುದು. ಆದರೆ ಹುಟ್ಟುವಾಗಲೇ ಸಂಪೂರ್ಣ ಕಿವುಡುತನ ಇರುವ ಮಕ್ಕಳಿಗೆ ಕಿವಿಯ ಒಳಗಡೆ ಇರುವ ಶ್ರವಣಕ್ಕೆ ಸಂಬಂಧಿಸಿದ ನರಗಳು ಕೆಲಸ ಮಾಡುವುದಿಲ್ಲ. ಆದ್ದರಿಂದ ಇಂತಹ ಮಕ್ಕಳಿಗೆ ಶ್ರವಣ ಸಾಧನ ಕೆಲಸ ಮಾಡುವುದಿಲ್ಲ. ಕಳೆದ 50 ರಿಂದ 60 ವರ್ಷಗಳಿಂದ ಇದರ ಬಗ್ಗೆ ನಿರಂತರವಾಗಿ ಸಂಶೋಧನೆಗಳು ನಡೆದಿದ್ದರೂ ಸಹ ಕಳೆದ 15 ವರ್ಷಗಳಿಂದ ಇದು ಚೆನ್ನಾಗಿ ಅಭಿವೃದ್ಧಿಯಾಗಿದೆ. ಭಾರತದಲ್ಲಿ ಕಳೆದ 10 ವರ್ಷಗಳಿಂದ ಈ ಚಿಕಿತ್ಸೆ ಜನಪ್ರಿಯವಾಗಿದೆ.
ಕಾಕ್ಲಿಯರ್ ಚಿಕಿತ್ಸೆ ದುಬಾರಿ:ಕಾಕ್ಲಿಯರ್ ಶಸ್ತ್ರಚಿಕಿತ್ಸೆಗೆ ಸುಮಾರು 10 ರಿಂದ 12 ಲಕ್ಷ ರೂ ಖರ್ಚಾಗುತ್ತದೆ. ಎಲ್ಲರಿಗೂ ಇದನ್ನು ಭರಿಸಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ಎಡಿಐಪಿ ಯೋಜನೆಯಡಿ ಇದರ ವೆಚ್ಚ ಭರಿಸುತ್ತಿದ್ದರೂ ಹೆಚ್ಚಿನ ಪ್ರಮಾಣದ ಅನುದಾನ ದೊರೆಯುತ್ತಿರಲಿಲ್ಲ. ಈಗ ರಾಷ್ಟ್ರೀಯ ಕಿವುಡುತನ ನಿರ್ಮೂಲನಾ ಮತ್ತು ನಿಯಂತ್ರಣ ಯೋಜನೆಯಡಿ ಅರಿವು ಮೂಡಿಸಲಾಗುತ್ತಿದೆ. ಈ ಯೋಜನೆಯಡಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವಾಕ್ ಶ್ರವಣ ಕೇಂದ್ರ ಪ್ರಾರಂಭಿಸಲಾಗಿದೆ. ಹುಟ್ಟುವ ಎಲ್ಲಾ ಮಕ್ಕಳಿಗೆ ಅತ್ಯಾಧುನಿಕ ತಂತ್ರಜ್ಞಾನದಿಂದ ಕಿವುಡುತನ ತಪಾಸಣೆ ಮಾಡಲಾಗುತ್ತಿದೆ.
ಈ ವರ್ಷ ರಾಜ್ಯದಲ್ಲಿ 500 ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಮಾಡುವ ಗುರಿ ಹೊಂದಲಾಗಿದೆ. ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಮುಂಚಿನ ತಪಾಸಣೆ, ಕಾಕ್ಲಿಯರ್ ಇಂಪ್ಲಾಂಟ್ ಸಾಧನ, ಶಸ್ತ್ರಚಿಕಿತ್ಸೆ ಮತ್ತು ನಂತರದ ವಾಕ್‍ಶ್ರವಣ ಪುನಶ್ಚೇತನ ಚಿಕಿತ್ಸೆ ಇವೆಲ್ಲವೂ ಉಚಿತ. ವಾಕ್‍ಶ್ರವಣ ಪುನಶ್ಚೇತನ ಚಿಕಿತ್ಸೆ ಕ್ಲಿಷ್ಟಕರವಾಗಿದ್ದು 8 ರಿಂದ 10 ತಿಂಗಳು ಹಿಡಿಯುತ್ತದೆ. ಶಸ್ತ್ರಚಿಕಿತ್ಸೆಯಾದ ನಂತರ ಕಾಕ್ಲಿಯರ್ ಇಂಪ್ಲಾಂಟ್ ಆದ ಮೇಲೆ ಯಂತ್ರದ ಸಿಗ್ನಲ್ಗಳು ಸರಿಯಾಗಿ ಬರುತ್ತಿವೆಯೇ ಎಂದು ಪರೀಕ್ಷಿಸಿ, ಶಸ್ತ್ರಚಿಕಿತ್ಸೆಯಾದವರಿಗೆ ಹಾಗೂ ಅವರ ಪೋಷಕರಿಗೆ ತರಬೇತಿ ನೀಡಬೇಕಾಗುತ್ತದೆ. ಇದರಿಂದ ಇದು ಸಮಯ ತೆಗೆದುಕೊಳ್ಳುತ್ತದೆ. ಮೆಗ್ಗಾನ್ ಆಸ್ಪತ್ರೆಗೆ ಕೇಂದ್ರ ಸರ್ಕಾರದ ಯೋಜನೆಯಡಿ ಈಗ ಅನುದಾನ ಹಾಗೂ ಶಸ್ತ್ರಚಿಕಿತ್ಸೆಗೆ ಬೇಕಾದ ಯಂತ್ರೋಪಕರಣಗಳು ಬಂದಿರುವುದರಿಂದ ಶಸ್ತ್ರಚಿಕಿತ್ಸೆ ಪ್ರಾರಂಭಿಸಲಾಗಿದೆ.