ಶಿವಮೊಗ್ಗ: ಕೊರೊನಾ ಜೊತೆ ಜೊತೆಗೆ ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ (ಕೆಎಫ್ಡಿ) ಕಾಣಿಸಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಮೊದಲ ಮಂಗನಕಾಯಿಲೆ ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೂಡಿಗೆ ಗ್ರಾಮದ 57 ವರ್ಷದ ಮಹಿಳೆಯೊಬ್ಬರಲ್ಲಿ ಮಂಗನಕಾಯಿಲೆ ಪತ್ತೆಯಾಗಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಮೊದಲ ಮಂಗನ ಕಾಯಿಲೆ ಕೇಸ್ ಪತ್ತೆ ಜ್ವರದಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಹೋದಾಗ ಆಕೆಗೆ ಮಂಗನಕಾಯಿಲೆ ಲಕ್ಷಣಗಳು ಇದ್ದಿದ್ದರಿಂದ ಪರೀಕ್ಷೆಗೊಳಪಡಿಸಲಾಗಿತ್ತು. ಆಗ ಮಹಿಳೆಗೆ ಕಾಯಿಲೆ ತಗುಲಿರುವುದು ದೃಢಪಟ್ಟಿದೆ. ಸದ್ಯ ಮಂಗನಕಾಯಿಲೆಗೆ ತುತ್ತಾಗಿರುವ ಮಹಿಳೆಯನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ರದ್ದು: ನಿರ್ಣಯ ಸ್ವಾಗತಿಸಿದ ವ್ಯಾಪಾರಿಗಳ ಸಂಘಟನೆಗಳು
ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಮಂಗನಕಾಯಿಲೆಗೆ ಕಳೆದ ಎರಡು ವರ್ಷಗಳ ಹಿಂದೆ 26 ಮಂದಿ ಸಾವನ್ನಪ್ಪಿದ್ದರು. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ನಿರಂತರವಾಗಿ ಕೆಎಫ್ಡಿ ವ್ಯಾಕ್ಸಿನ್ ನೀಡಲು ಆರಂಭಿಸಿತ್ತು. ಜೊತೆಗೆ ಪ್ರತಿ ಆರು ತಿಂಗಳಿಗೊಮ್ಮೆ ಮಂಗನಕಾಯಿಲೆ ಕಾಣಿಸಿಕೊಳ್ಳುವ ಪ್ರದೇಶಗಳ ಕಾಡಿನಲ್ಲಿ ಉಣುಗುಗಳ ಪರೀಕ್ಷೆ ನಡೆಸಲಾಗಿತ್ತು. ಹೀಗಾಗಿ, ಕಳೆದ ಎರಡು ವರ್ಷಗಳಿಂದ ಕೆಎಫ್ಡಿ ಪತ್ತೆಯಾಗಿರಲಿಲ್ಲ.
ಆದರೆ, ಡಿಸೆಂಬರ್ ತಿಂಗಳಿನಲ್ಲಿ ಅರಳಗೋಡು ಭಾಗದಲ್ಲಿ ಉಣುಗುಗಳ ಪರೀಕ್ಷೆ ನಡೆಸಿದಾಗ ಆ ಉಣುಗುಗಳಲ್ಲಿ ಕೆಎಫ್ಡಿ ವೈರಸ್ ಇರುವುದು ಪತ್ತೆಯಾಗಿತ್ತು. ಇದರಿಂದಾಗಿ ಅರಳಗೋಡು ಭಾಗದ ಜನರಲ್ಲಿ ಮಂಗನಕಾಯಿಲೆ ಆತಂಕ ಎದುರಾಗಿತ್ತು. ಈ ನಡುವೆ ಇದೀಗ ತೀರ್ಥಹಳ್ಳಿ ತಾಲೂಕಿನಲ್ಲಿ ಮೊದಲ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ