ಶಿವಮೊಗ್ಗ:ಶನಿವಾರ ರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲು ಸಂತೋಷ ಕೂಟ ಆಯೋಜಿಸಲಾಗಿತ್ತು. ಅಲ್ಲಿ ಎಲ್ಲರೂ ಸಂಭ್ರಮದಿಂದ ಸೇರಿದ್ದರು. ಈ ಸಂತಸ ಕೆಲವೇ ಕ್ಷಣಗಳಲ್ಲಿ ಮಾಯವಾಗಿ ಶೋಕ ಮಡುಗಟ್ಟಿತು. ಕಾರಣ ಸಂಭ್ರಮಾಚರಣೆ ಮಾಡುತ್ತಿರುವಾಗ, ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ಯುವಕನೊಬ್ಬ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇನ್ನು ಘಟನೆ ಬಳಿಕ ಗುಂಡು ಹಾರಿಸಿದ ವ್ಯಕ್ತಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ವಿದ್ಯಾನಗರದ ಮಂಜುನಾಥ್ ಓಲೇಕರ್ ಮತ್ತು ಹೊಸನಗರ ಮೂಲದ ವಿನಯ್ (34) ಮೃತರೆಂದು ತಿಳಿದುಬಂದಿದೆ. ಮಂಜುನಾಥ್ ಶಿವಮೊಗ್ಗದ ಗೋಪಾಲ ಗ್ಲಾಸ್ ಹೌಸ್ನ ಮಾಲೀಕರಾಗಿದ್ದು, ತಮ್ಮ ಮನೆಯಲ್ಲೇ ಹೊಸ ವರ್ಷದ ಆಚರಣೆಗಾಗಿ ಶಾಮಿಯಾನ್ ಹಾಕಿಸಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ಮಂಜುನಾಥ್ ಅವರ ಮಗ ಮತ್ತು ಸ್ನೇಹಿತರೂ ಕೂಡ ಭಾಗಿಯಾಗಿದ್ದರು. ಈ ವೇಳೆ ಮಂಜುನಾಥ್ ಅವರ ಬಳಿ ಇರುವ ಲೈಸೆನ್ಸ್ ಹೊಂದಿರುವ ಗನ್ನಿಂದ ಆಕಸ್ಮಿಕವಾಗಿ ಫೈರ್ ಆಗಿ ವಿನಯ್ಗೆ ತಗುಲಿತ್ತು.
ಭಯದಿಂದ ಹೃದಯಾಘಾತ?:ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಮಂಜುನಾಥ್ ಓಲೇಕರ್ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಅದು ಮಿಸ್ ಆಗಿ ಪಾರ್ಟಿಗೆ ಬಂದಿದ್ದ ವಿನಯ್ ಎಂಬ ಯುವಕನಿಗೆ ತಾಗಿದೆ. ಗಾಯಗೊಂಡ ವಿನಯ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾನು ಹಾರಿಸಿದ ಗುಂಡು ಪುತ್ರನ ಸ್ನೇಹಿತನಿಗೆ ತಾಗಿತು ಎಂದು ಆತಂಕಗೊಂಡ ಮಂಜುನಾಥ್ ಓಲೇಕರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಂಜುನಾಥ್ ಅವರ ಬಳಿ ಗನ್ಗೆ ಲೈಸೆನ್ಸ್ ಇದೆಯಂತೆ. ವಿನಯ್ ಹೊಸನಗರ ಮೂಲದ ವಿನಯ್ ವಾಲಿಬಾಲ್ ಆಟಗಾರನಾಗಿದ್ದು, ಸದ್ಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಪಿಹೆಚ್ಡಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.