ಶಿವಮೊಗ್ಗ :ಪ್ರತಿ ವರ್ಷ ಪಟಾಕಿ ಮಾರಾಟವನ್ನು ನಗರದ ಸೈನ್ಸ್ ಮೈದಾನ ಹಾಗೂ ನೆಹರು ಕ್ರೀಡಾಂಗಣದಲ್ಲಿ ನಡೆಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನಗರದ ಹಳೆ ಜೈಲು ಆವರಣದ ಫ್ರೀಡಂ ಪಾರ್ಕ್ನಲ್ಲಿ ಮಾರಾಟ ಮಾಡಲು ಸೂಚಿಸಿದೆ. ಅದರಂತೆ ಪಟಾಕಿ ಮಾರಾಟಗಾರರು ಸಹ ಜಿಲ್ಲಾಡಳಿತದ ಆದೇಶದ ಮೇರೆಗೆ ಫ್ರೀಡಂ ಪಾರ್ಕ್ನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.
ಪ್ರತಿವರ್ಷ ಜಿಲ್ಲಾಡಳಿತ ನಗರದ ಎರಡು ಕಡೆ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡುತ್ತಿತ್ತು. ಆದರೆ ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ನಡೆದ ಅವಘಡದಿಂದ ಎಚ್ಚೆತ್ತು ನಗರದ ಒಂದೇ ಕಡೆ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಳೆದ ವರ್ಷ ಗಾಂಧಿ ಬಜಾರ್, ಸೈನ್ಸ್ ಮೈದಾನ, ನೆಹರು ಕ್ರೀಡಾಂಗಣ ಹಾಗೂ ಮಲ್ಲಿಗೇನಹಳ್ಳಿಯಲ್ಲಿ ಪಟಾಕಿ ಮಾರಾಟ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಒಂದೇ ಕಡೆ ಪಟಾಕಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಅವಘಡಗಳ ತಡೆಗೆ ಜಿಲ್ಲಾಡಳಿತ ಪ್ಲಾನ್ ಮಾಡಿದೆ.
ಜಿಲ್ಲಾಡಳಿತ ಪಟಾಕಿ ಮಾರಾಟಗಾರರಿಗೆ ತಮ್ಮ ಮಳಿಗೆಗಳ ನಿರ್ಮಾಣಕ್ಕೆ ಸೂಕ್ತ ನಿರ್ದೇಶನ ನೀಡಿದೆ. ಪ್ರತಿ ಮಳಿಗೆಗಳು ಕೇವಲ 10*10 ರಲ್ಲಿ ನಿರ್ಮಿಸಲು ಸೂಚಿಸಿದೆ. ಅಲ್ಲದೇ ಪ್ರತಿ ಮಳಿಗೆ ಮುಂದೆ ನೀರು ಹಾಗೂ ಮರಳು ತುಂಬಿದ ಬಕೆಟ್ ಇಡಲು ಹಾಗೂ ಬೆಂಕಿ ನಿರೋಧಕ ಸಿಲಿಂಡರ್ಗಳನ್ನು ಇಡಲು ಸೂಚನೆ ನೀಡಿದೆ. ಈ ಮೂಲಕ ಆಕಸ್ಮಿಕ ಬೆಂಕಿ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ಅದರಂತೆ ಮಳಿಗೆ ನಿರ್ಮಾಣ ಮಾಡಿಕೊಂಡಿರುವ ಎಲ್ಲಾ ವ್ಯಾಪಾರಸ್ಥರು ಸಹ ಫೈರ್ ಸೇಫ್ಟಿಯನ್ನು ಮಾಡಿಕೊಂಡಿದ್ದಾರೆ.
ಪಟಾಕಿ ವ್ಯಾಪಾರ ಜೋರು : ಈ ಬಾರಿ ಒಂದೇ ಕಡೆ ಪಟಾಕಿ ಮಾರಾಟ ಮಾಡುತ್ತಿರುವುದರಿಂದ ಪಟಾಕಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದೇ ಕಡೆ ಪಟಾಕಿ ಮಳಿಗೆಗಳು ಇರುವುದರಿಂದ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಇಲ್ಲೆ ಬಂದು ಪಟಾಕಿ ಕೊಂಡು ಕೊಂಡು ಹೋಗುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಪಟಾಕಿ ಮಾರಾಟ ಜೋರಾಗಿದೆ.
ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ :ಜಿಲ್ಲಾಡಳಿತ ಪಟಾಕಿ ಮಾರಾಟಕ್ಕೆ ಹಲವು ಷರತ್ತುಗಳನ್ನು ವಿಧಿಸಿದ್ದು ಅದರಲ್ಲಿ ಪ್ರಮುಖವಾಗಿ ಹಸಿರು ಪಟಾಕಿ ಮಾರಾಟ ಮಾಡುವುದರ ಕುರಿತು ತಿಳಿಸಿದೆ. ಮಾರಾಟಗಾರರು ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಸೂಚಿಸಿದೆ. ಅದರಂತೆ ಮಾರಾಟಗಾರರು ಹಸಿರು ಪಟಾಕಿಗಳನ್ನೆ ಮಾರಾಟ ಮಾಡುತ್ತಿದ್ದಾರೆ. ಪಟಾಕಿಯ ಗುರುತು ಹಾಗೂ ಪಕ್ಕದಲ್ಲಿ ಸ್ಕ್ಯಾನ್ ಇರುವ ಚಿತ್ರ ಇದ್ರೆ ಅದು ಹಸಿರು ಪಟಾಕಿ ಎಂದು ಕರೆಯುತ್ತಾರೆ. ಹಸಿರು ಪಟಾಕಿಯಲ್ಲಿ ಬೇರಿಯಂ ಸಲ್ಫೇಟ್ ಸೇರಿದಂತೆ ಕೆಲವೊಂದು ಅಪಾಯಕಾರಿ ಸಲ್ಪೇಟ್ಗಳನ್ನು ಒಳಗೊಂಡಿರುವ ಪಟಾಕಿಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಈ ರೀತಿಯ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ.