ಶಿವಮೊಗ್ಗ:ಜಿಲ್ಲೆಯ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಿಸಲಾಗಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 7,27,310 ಮಹಿಳಾ ಮತದಾರರು ಹಾಗೂ 7,14,490 ಪುರುಷ ಮತದಾರರು ಸೇರಿ ಒಟ್ಟು 14,41,833 ಅರ್ಹ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್ ಸೆಲ್ವಮಣಿ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ 2023ರ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಮತದಾರರ ಲಿಂಗಾನುಪಾತ ಉತ್ತಮಗೊಂಡಿದ್ದು, 1 ಸಾವಿರ ಪುರುಷ ಮತದಾರರಿಗೆ 1,018 ಮಹಿಳಾ ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಹೊಸದಾಗಿ 22,185 ಯುವ ಮತದಾರರ ಸೇರ್ಪಡೆಯಾಗಿದ್ದು, ಇವರಲ್ಲಿ 11 760ಪುರುಷ ಹಾಗೂ 10,419 ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 1,775 ಮತಗಟ್ಟೆಗಳು ಇವೆ ಎಂದರು.
ವಿಧಾನಸಭಾ ಕ್ಷೇತ್ರವಾರು ವಿವರ: ಮತದಾರರ ಅಂತಿಮ ಪಟ್ಟಿಯಲ್ಲಿ ಶಿವಮೊಗ್ಗ ಗ್ರಾಮಾಂತರದಲ್ಲಿ 1,03,534 ಪುರುಷ, 1,04,525 ಮಹಿಳಾ, ಮೂವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,08,062 ಮತದಾರರು ಇದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ 1,01,058 ಪುರುಷ, 1,06,546 ಮಹಿಳಾ, ಐವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 1,06,546 ಮತದಾರರು ಇದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ 1,23,770 ಪುರುಷ, 1,29,204 ಮಹಿಳಾ, 15 ತೃತೀಯ ಲಿಂಗಿ ಸೇರಿದಂತೆ 2,52,989 ಮತದಾರರು ಇದ್ದಾರೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ 91,376 ಪುರುಷ, 93,475 ಮಹಿಳಾ, ಮೂವರು ತೃತೀಯ ಲಿಂಗಿ ಸೇರಿದಂತೆ 1,84,854 ಮತದಾರರು ಇದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ 98,281 ಪುರುಷ, 97,086 ಮಹಿಳಾ, ನಾಲ್ವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 1,95,371 ಮತದಾರರು ಇದ್ದಾರೆ. ಸೊರಬ ಕ್ಷೇತ್ರದಲ್ಲಿ 97,070 ಪುರುಷ, 1,01,326 ಮಹಿಳಾ, ಇಬ್ಬರು ತೃತೀಯ ಲಿಂಗಿ ಸೇರಿದಂತೆ ಒಟ್ಟು 1,92,220 ಮತದಾರರು ಇದ್ದಾರೆ. ಸಾಗರ ಕ್ಷೇತ್ರದಲ್ಲಿ 99,401 ಪುರುಷ, 1,01,326 ಮಹಿಳಾ, ಒಂದು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,00,728 ಮತದಾರರು ಇದ್ದಾರೆ. ಲಿಂಗಾನುಪಾತ ಅತಿ ಹೆಚ್ಚು ಭದ್ರಾವತಿ ಕ್ಷೇತ್ರದಲ್ಲಿ 1,054 ಇದ್ದು, ಅತಿ ಕಡಿಮೆ ಸೊರಬ ಕ್ಷೇತ್ರದಲ್ಲಿ 980 ಇದೆ ಎಂದರು.