ಶಿವಮೊಗ್ಗ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಂದೆ, ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಾವಳ್ಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಶಿವಮೊಗ್ಗದ ಇಲಿಯಾಜ್ ಬಡಾವಣೆಯ ನಿವಾಸಿಗಳಾದ ಅಲ್ತಾಫ್ (35) ಹಾಗೂ ಮದೀಯಾ(8) ಎಂದು ಗುರುತಿಸಲಾಗಿದೆ.
ಮೃತ ಅಲ್ತಾಫ್ ಮತ್ತು ಮಗಳು ಮದೀಯಾ ಶಿವಮೊಗ್ಗದಿಂದ ಚಿತ್ರದುರ್ಗದ ಕಡೆಗೆ ಡಸ್ಟರ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹೊಳೆಹೊನ್ನೂರಿನಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಇನ್ನೊಂದು ಕಾರು ಮುಂದಿನಿಂದ ಡಿಕ್ಕಿ ಹೊಡೆದಿದೆ. ಎರಡೂ ಕಾರುಗಳು ವೇಗವಾಗಿ ಚಲಿಸುತ್ತಿದ್ದರಿಂದ ಡಿಕ್ಕಿಯ ರಭಸಕ್ಕೆ ಒಂದು ಕಾರು ರಸ್ತೆಯ ಬದಿಯ ಗುಂಡಿಗೆ ಇಳಿದಿದೆ. ಎರಡು ಕಾರಿನಲ್ಲಿ ಒಟ್ಟು ಎಂಟು ಜನ ಪ್ರಯಾಣ ಮಾಡುತ್ತಿದ್ದರು. ಆರು ಜನ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕಾರಿಪುರದ ಹೋಟೆಲ್ನಲ್ಲಿ ಬೆಂಕಿ ಅವಘಡ: ಶಿಕಾರಿಪುರ ಪಟ್ಟಣದ ಚನ್ನಕೇಶ್ವರ ನಗರದಲ್ಲಿರುವ ಸ್ವಾಮಿ ಖಾನಾವಳಿ ಹೋಟೆಲ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಹೋಟೆಲ್ನ ಸಾಮಗ್ರಿಗಳು ಹೊತ್ತಿ ಉರಿದಿದೆ. ಈ ವೇಳೆ ಹೋಟೆಲ್ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಡುಗೆ ಮನೆಯ ಪಾತ್ರೆ ಇನ್ನಿತರ ವಸ್ತುಗಳು ಸುಟ್ಟು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.