ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಶಿವಮೊಗ್ಗ/ಬೆಂಗಳೂರು :ರಾಜ್ಯದ ಹೈನುಗಾರಿಕೆಯ ಜೀವನಾಡಿ ನಂದಿನಿ ಹಾಲು ಒಕ್ಕೂಟ ಸಂಸ್ಥೆಯನ್ನು ಗುಜರಾತ್ ಮೂಲದ ಅಮುಲ್ ಜೊತೆ ವಿಲೀನ ಮಾಡಬಾರದು. ಆನ್ಲೈನ್ನಲ್ಲಿ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ರಾಜ್ಯ ರೈತ ಸಂಘ ಆಗ್ರಹಿಸಿದೆ. ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತ ಸಂಘ ಸಭೆ ಸೇರಿ ಅಮುಲ್ ಜೊತೆ ನಂದಿನಿಯನ್ನು ವಿಲೀನಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಕರ್ನಾಟಕದ ಮತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆ ನಂದಿನಿ. ಇವತ್ತು ರೈತರು, ಹಾಲು ಉತ್ಪಾದನೆ ಮಾಡುತ್ತಿರುವವರು, ಮಾರಾಟ ಮಾಡುತ್ತಿರುವವರು, ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡುತ್ತಿರುವವರೂ ಸೇರಿ ನಂದಿನಿ ಸಂಸ್ಥೆಯನ್ನು ಅಂದಾಜು ಒಂದು ಕೋಟಿಗೂ ಅಧಿಕ ಜನರ ಅವಲಂಬಿಸಿದ್ದಾರೆ ಎಂದರು.
ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಹೊರ ರಾಜ್ಯದ ಬ್ಯಾಂಕ್‌ಗಳ ಜೊತೆ ವಿಲೀನ ಮಾಡಿದ್ದಾರೆ. ನಂತರ ಎಂಪಿಎಂ ಹಾಗೂ ವಿಐಎಸ್ಎಲ್ ಕಾರ್ಖಾನೆಗಳನ್ನು ಮುಚ್ಚಿದ್ದಾರೆ. ಇದರಂತೆ ಮುಂದೆ ಕರ್ನಾಟಕದ ನಂದಿನಿ ಸಂಸ್ಥೆಯನ್ನೂ ಗುಜರಾತಿನ ಅಮುಲ್ ಜೊತೆ ವಿಲೀನ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಮುಲ್ ಉತ್ಪನ್ನಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುವುದಕ್ಕೆ ಅನುಮತಿ ಕೊಟ್ಟಿದ್ದಾರೆ. ನಂದಿನಿ ಹಾಗೂ ಅಮುಲ್ ನಡುವೆ 15 ರೂಪಾಯಿ ವ್ಯತ್ಯಾಸ ಇದೆ. ನಂದಿನಿ ಒಂದು ಲೀಟರ್ ಹಾಲಿಗೆ 39 ರೂ ಇದ್ದರೆ, ಅಮುಲ್ಗೆ 59 ರೂ ಇದೆ. ನಮ್ಮ ರೈತರಿಗೆ ಮತ್ತು ಹಾಲು ಉತ್ಪಾದಕರಿಗೆ ಕಡಿಮೆ ದರ ಕೊಟ್ಟು, ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಜನರು ಅಂಗಡಿಗೆ ಹೋಗಿ ಖರೀದಿ ಮಾಡುವ ಮನಸ್ಥಿತಿ ಕಳೆದುಕೊಂಡಿದ್ದಾರೆ, ಹೀಗಾಗಿ ಜನ ಹೆಚ್ಚಾಗಿ ಆನ್ಲೈನ್ ಅನ್ನು ಅವಲಂಬಿಸಿದ್ದು ನಂದಿನಿ ಹಾಲನ್ನು ಕೊಳ್ಳುವವರು ಇಲ್ಲದೇ ನಷ್ಟ ಅನುಭವಿಸಬೇಕಾಗುತ್ತದೆ. ಕೊನೆಗೆ ಒಂದು ದಿನ ಸಂಸ್ಥೆಯನ್ನು ನಡೆಸಲಾಗುತ್ತಿಲ್ಲ ಎಂದು ಹೇಳಿ ಅಮುಲ್ ಜೊತೆ ವಿಲೀನ ಮಾಡುವ ಹುನ್ನಾರವಿದು ಎಂದು ಕಿಡಿಕಾರಿದರು.
ಆದ್ದರಿಂದ ಮುಖ್ಯಮಂತ್ರಿಗಳು ಈ ವಿಚಾರವನ್ನು ಸಮರ್ಥನೆ ಮಾಡಿಕೊಳ್ಳಬಾರದು. ಇದನ್ನು ವಿರೋಧಿಸಬೇಕು. ಕರ್ನಾಟಕದ ಮತ್ತು ರೈತರ ಹೆಮ್ಮೆಯ ಸಂಸ್ಥೆಯನ್ನು ಉಳಿಸಬೇಕು. ಚುನಾವಣೆ ನೀತಿ ಸಂಹಿತೆ ಇಲ್ಲದೇ ಇದ್ದದ್ದರೆ ಇಡೀ ಕರ್ನಾಟಕವೇ ಹೊತ್ತಿ ಉರಿಯುತ್ತಿತ್ತು. ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಯಾವುದೇ ಪ್ರತಿಭಟನೆ, ಹೋರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಚುನಾವಣೆಗೂ ಮುನ್ನವೇ ಸರಿಯಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಎಚ್ಚರಿಕೆ ನೀಡಿದರು.
ಹೈನುಗಾರಿಕೆ ನಿರ್ಮೂಲನೆಗೆ ಸಂಚು- ಬಯ್ಯಾ ರೆಡ್ಡಿ:ಅಮುಲ್ ನೆಪದಲ್ಲಿ ರಾಜ್ಯದ ರೈತರ ಹೈನುಗಾರಿಕೆಯನ್ನು ನಿರ್ಮೂಲನೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಜಿ.ಸಿ.ಬಯ್ಯಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಇಡೀ ದೇಶದಲ್ಲೇ ಹೈನುಗಾರಿಕೆ ಉತ್ಪಾದನೆ ಹಾಗೂ ಸಹಕಾರಿ ಸಂಸ್ಕರಣೆ ಅನುಪಾತ ಗರಿಷ್ಠ ಪ್ರಮಾಣದಲ್ಲಿರುವ ರಾಜ್ಯದ ರೈತಾಪಿ ಹೈನುಗಾರಿಕೆಯನ್ನು ಸರ್ವನಾಶ ಮಾಡಲು, ಡೈರಿ ಕ್ಷೇತ್ರದ ಕಾರ್ಪೊರೇಟೀಕರಣ ಸಾಧಿಸಲು, ಆಸ್ಟ್ರೇಲಿಯಾ, ಡೆನ್ಮಾರ್ಕ್, ನ್ಯೂಜಿಲೆಂಡ್ ಮುಂತಾದ ಯೂರೋಪಿಯನ್ ದೇಶಗಳ ಡೈರಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಅಮುಲ್ ಹೆಸರಿನ ಮರೆಯಲ್ಲಿ ನಡೆಯುತ್ತಿರುವ ಬಹುದೊಡ್ಡ ಹುನ್ನಾರವನ್ನು ಹಿಮ್ಮೆಟ್ಟಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ರಾಜ್ಯದ ರೈತಾಪಿ ಸಮುದಾಯ, ಸಹಕಾರಿ ಸಮುದಾಯ ಹಾಗೂ ನಾಡಿನ ಜನತೆಯಲ್ಲಿ ವಿನಂತಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಶೀಘ್ರದಲ್ಲೇ ನಂದಿನಿ ವಿವಾದ ತಣಿಸುವಂತೆ ರಾಜ್ಯ ಘಟಕಕ್ಕೆ ಬಿಜೆಪಿ ಹೈಕಮಾಂಡ್ ಸೂಚನೆ