ಶಿವಮೊಗ್ಗ:ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿರುವ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆಗೆ ರೈತರಿಂದ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗ ತಾಲೂಕು ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಫೆ.27ರಂದು ದಿನಾಂಕ ನಿಗದಿಯಾಗಿದೆ. ಆದರೆ, ಸರ್ಕಾರ ಭೂಮಿ ಕೊಟ್ಟ ರೈತರಿಗೆ ಒಂದು ನಿವೇಶನ ಹಾಗೂ ಉದ್ಯೋಗದ ಭರವಸೆ ನೀಡಿತ್ತು. ಕೊಟ್ಟ ಭರವಸೆ ಈಡೇರದ ಕಾರಣ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಬಿಎಸ್ವೈ ಕನಸಿನ ಕೂಸು:ಸೋಗಾನೆ ವಿಮಾನ ನಿಲ್ದಾಣವು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ 'ಕನಸಿನ ಕೂಸು' ಎಂದರೆ ತಪ್ಪಾಗಲಾರದು. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದ ವೇಳೆ ವಿಮಾನ ನಿಲ್ದಾಣ ಮಾಡುವ ಕನಸು ಕಂಡಿದ್ದರು. ಇದಕ್ಕಾಗಿ ಸೋಗಾನೆಯ ಸರ್ವೆ ನಂಬರ್ 120ರಲ್ಲಿ ಇದ್ದ ಬಗರ್ ಹುಕುಂ ಭೂಮಿ ಸುಮಾರು 530.21 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿತ್ತು.
ಈ ಭಾಗ ಸಂಪೂರ್ಣ ಬಗರ್ ಹುಕುಂ ಜಾಗವಾದ ಕಾರಣ ಪ್ರತಿಯೊಬ್ಬ ರೈತರಿಗೆ 4 ಎಕರೆ ಭೂಮಿ ಮೀರದಂತೆ ಎಕರೆಗೆ 2 ಲಕ್ಷ ರೂ ನೀಡುವ ತೀರ್ಮಾನದ ಜತೆಗೆ ಭೂಮಿ ಕಳೆದು ಕೊಳ್ಳುವವರಿಗೆ ಪರ್ಯಾಯ ನಿವೇಶನ ಸೇರಿದಂತೆ ಮನೆಗೊಂದು ಕೆಲಸ ನೀಡುವ ಭರವಸೆಯನ್ನು ನೀಡಿದ್ದರು. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕಳೆಗೆ ಇಳಿದ ನಂತರ ಇದು ಕುಂಟುತ್ತಾ ಸಾಗಿತು. ಶಿವಮೊಗ್ಗ ವಿಮಾನ ನಿಲ್ದಾಣದ ಜತೆಗೆ ಪ್ರಾರಂಭವಾದ ಕಲಬುಗಿ ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯವಾಗಿ ಸಂಚಾರಕ್ಕೆ ಅವಕಾಶ ದೂರೆಯಿತು. ಆದರೆ, ಶಿವಮೊಗ್ಗ ವಿಮಾನ ನಿಲ್ದಾಣ ಕುಂಟುತ್ತಾ ಸಾಗಿತು.
ಫೆ.27 ರಂದು ಲೋಕಾರ್ಪಣೆ:ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಲೇ ಹಳೆಯ ಗುತ್ತಿಗೆದಾರನ್ನು ಬಿಟ್ಟು ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಡಲಾಯಿತು. ಹಾಲಿ ಇದರ ಕಾಮಗಾರಿಯನ್ನು ನ್ಯಾಷನಲ್ ಕನ್ಸಟ್ರಕ್ಷನ್ಗೆ ವಹಿಸಲಾಗಿದ್ದು, ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಫೆ.27 ರಂದು ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಾಗುವುದು. ಇದರ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಘೋಷಿಸಿದ್ದಾರೆ.
ವಿಮಾನ ನಿಲ್ದಾಣದ ವಿಶೇಷತೆ:ಮಲೆನಾಡಿನ ಪ್ರಥಮ ವಿಮಾನ ನಿಲ್ದಾಣ ಎಂಬ ಖ್ಯಾತಿ. ವಿಮಾನ ನಿಲ್ದಾಣ ಕಮಲಾಕೃತಿಯಲ್ಲಿದೆ. ಇದು ರಾಜ್ಯದ 2ನೇ ಅತಿ ದೊಡ್ಡದಾದ ವಿಮಾನದ ರನ್ ವೇ ಹೊಂದಿದೆ. ಆರಂಭದಲ್ಲಿ 1,200 ಮೀಟರ್ ರನ್ ವೇ ಆಗಿತ್ತು. ಈಗ 2050 ಮೀಟರ್ ಉದ್ದದ ರನ್ ವೇ ತಯಾರಾಗಿದೆ. ರಾತ್ರಿ ವೇಳೆಯಲ್ಲಿ ಸಹ ವಿಮಾನ ಇಳಿಯುವ ಸೌಲಭ್ಯ ಒದಗಿಸಲಾಗಿದೆ.
ರೈತರ ವಿರೋಧ ಯಾಕೆ:ವಿಮಾನ ನಿಲ್ದಾಣ ನಿರ್ಮಾಣದ ಬಗರ್ ಹುಕುಂ ಭೂಮಿ ನೀಡಲು ಒಪ್ಪದ ರೈತರಿಗೆ ಪ್ರತಿ ಎಕರೆಗೆ 2 ಲಕ್ಷ ರೂ., ಒಂದು ನಿವೇಶನ ಹಾಗೂ ಉದ್ಯೋಗದ ಭರವಸೆ ನೀಡಲಾಗಿತ್ತು. ಆದರೆ ಕೊಟ್ಟ ಭರವಸೆ ಇನ್ನೂ ಈಡೇರಿಲ್ಲ. ಕಳೆದ 15 ವರ್ಷಗಳಿಂದ ನಿವೇಶನಕ್ಕಾಗಿ ಮನವಿ ಸಲ್ಲಿಸುತ್ತಾ ಬಂದಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ರೈತರು ಈಗ ಹೈಕೊರ್ಟ್ ಮೇಟ್ಟಿಲೇರಿದ್ದಾರೆ.