ಶಿವಮೊಗ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರ ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತವೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಾ ಇರುತ್ತಾರೆ. ಇನ್ನೂ ಕೆಲವರು ತಮ್ಮ ನೆಚ್ಚಿನ ನಟನ ಸ್ಟೈಲ್ ಫಾಲೋ ಮಾಡುವುದನ್ನು ನೀವೆಲ್ಲ ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ಅಭಿಮಾನಿ ನಟ ದರ್ಶನ್ ಅವರನ್ನು ನೋಡುವ ಭಾಗ್ಯ ಸಿಕ್ಕರೆ ಸಾಕು ಎಂದು ಕಾದು ಕುಳಿತಿದ್ದಾರೆ.
ಅಂದಹಾಗೆ, ಈ ಅಭಿಮಾನಿಯ ಹೆಸರು ಸುದೀಪ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಮತ್ತಿಕೊಪ್ಪದ ನಿವಾಸಿ ಆಗಿದ್ದಾರೆ. ಮತ್ತಿಕೊಪ್ಪ ಗ್ರಾಮದ ಹಿರಿಯಣ್ಣ ಹಾಗೂ ತಾರಾ ದಂಪತಿಯ ಎರಡನೇ ಪುತ್ರನೇ ಈ ಸುದೀಪ್. ಅಂದ ಹಾಗೆ ಸುದೀಪ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಪಂಚಪ್ರಾಣ. ಡಿ ಬಾಸ್ ಎಂದರೆ ಸಾಕು ಇವರು ಒಮ್ಮಿಂದೊಮ್ಮಲೇ ಪುಳಕಿತರಾಗಿ ಬಿಡುತ್ತಾರೆ.
ದಚ್ಚು ಸಿನಿಮಾಗಳನ್ನು ನೋಡಿಯೇ ಇವರು ಬೆಳೆದಿದ್ದಾರೆ. ಹೀಗಾಗಿ ಅಪ್ಪಟ ಅಭಿಮಾನಿ ಸುದೀಪ್ಗೆ ನಟ ದರ್ಶನ್ ಅವರೇ ಎಲ್ಲವೂ ಆಗಿದ್ದಾರೆ. ಜೀವನದಲ್ಲಿ ಒಮ್ಮೆಯಾದರು ಅವರನ್ನು ನೋಡಬೇಕು ಎಂಬುದು ಅವರ ಹೆಬ್ಬಯಕೆ ಆಗಿದೆ. ಅಷ್ಟೇ ಅಲ್ಲ ನೆಚ್ಚಿನ ನಟನ ಕೈ ಕುಲುಕಬೇಕು, ಅವರ ಹತ್ತಿರ ಮಾತನಾಡಬೇಕು ಎಂಬುದು ಈತನ ಹಂಬಲ. ಇದಕ್ಕಾಗಿ ಈತ ಮನೆ ಬಿಟ್ಟು ಅನೇಕ ಬಾರಿ ಬೆಂಗಳೂರಿಗೆ ಸಹ ಹೋಗಿದ್ದ. ಆದರೆ, ಈವರೆಗೂ ದರ್ಶನ್ ಅವರ ದರ್ಶನ ಭಾಗ್ಯ ಸಿಕ್ಕಿಲ್ಲ.
ಇದನ್ನು ಓದಿ:ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನ : ಸರ್ಕಾರಿ ಶಾಲೆಗೆ ಡೆಸ್ಕ್ ವಿತರಿಸಿದ ಕೊಪ್ಪಳ ಅಭಿಮಾನಿಗಳು