ಹೆದ್ದಾರಿ ಪ್ರಾಧಿಕಾರದ ಎಇಇ ನಿಂಗಪ್ಪ ಶಿವಮೊಗ್ಗ:ಸಾಗರ ತಾಲೂಕು ಸಿಗಂದೂರು ಬಳಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಗೆ ನೀರು ಕಡಿಮೆಯಾಗಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಸಿಗಂದೂರು ನಾಡಿನ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಶ್ರೀ ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಲಿಂಗನಮಕ್ಕಿ ಡ್ಯಾಂನ ಹಿನ್ನೀರಿನಲ್ಲಿರುವ ಸಿಗಂದೂರಿಗೆ ತೆರಳಲು ಇರುವ ಮಾರ್ಗ ಎಂದರೆ ಅದು ಲಾಂಚ್. ಒಳನಾಡು ಸಾರಿಗೆ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ಲಾಂಚ್ಗಳು ಪ್ರತಿದಿನ ಸಾವಿರಾರು ಜನರನ್ನು ಹಾಗೂ ವಾಹನಗಳನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುತ್ತಿವೆ. ಆದರೆ ದುಬಾರಿಯಾದ ಈ ವ್ಯವಸ್ಥೆ ಬದಲಿಗೆ ಶಾಶ್ವತವಾದ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಿಂಗದೂರು ಮೂಲಕ ದಕ್ಷಿಣ ಕನ್ನಡವನ್ನು ಸಂಪರ್ಕಿಸಲು ಸುಲಭವಾಗುವಂತೆ ಬೃಹತ್ ಗಾತ್ರದ ಕೇಬಲ್ ಆಧಾರಿತ ಬ್ರಿಡ್ಜ್ನ್ನು ಇಲ್ಲಿ ನಿರ್ಮಾಣ ಮಾಡುತ್ತಿದೆ.
ಸುಮಾರು 2.14ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲದ, 423.15 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಯಿತು. ಕೊರೊನಾ ಹಾಗೂ ಹೆಚ್ಚಿನ ಪ್ರಮಾಣದ ಹಿನ್ನೀರಿನ ಕಾರಣ ಆರಂಭದ ಎರಡು ವರ್ಷ ನಿಧಾನವಾಗಿ ಸಾಗಿದ ಕಾಮಗಾರಿ ಕೆಲಸ ನಂತರ ವೇಗ ಪಡೆಯಿತು. ಪ್ರಸ್ತುತ ಆಳವಾದ ಹಿನ್ನೀರಿನಲ್ಲಿ 17 ಪಿಲ್ಲರ್ಗಳನ್ನು ನಿರ್ಮಿಸಲಾಗಿದ್ದು, ಪಿಲ್ಲರ್ಗಳ ನಡುವೆ ಪ್ರೀಕಾಸ್ಟ್ ಕಾಂಕ್ರೀಟ್ ಬ್ಲಾಕ್ಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ.
ಆದರೆ ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತಗೊಳ್ಳುತ್ತಿರುವ ಕಾರಣ ಕಳೆದೊಂದು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ. 1819 ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 1740 ಅಡಿ ನೀರಿದ್ದು ಸುಮಾರು 80 ಅಡಿಯಷ್ಟು ನೀರು ಕಡಿಮೆಯಾಗಿದೆ. ಬ್ರಿಡ್ಜ್ ನಿರ್ಮಾಣದ ಕೆಲಸ ಹಿನ್ನೀರಿನಲ್ಲೇ ನಡೆಯಬೇಕಿರುವ ಕಾರಣ ಭಾರೀ ಗಾತ್ರದ ಲಾಂಚ್ಗಳ ಓಡಾಟಕ್ಕೆ ಅಡಚಣೆಯುಂಟಾಗಿದೆ. ಈಗಿರುವ ನೀರಿನ ಮಟ್ಟದಲ್ಲಿ ಕ್ರೇನ್ಗಳ ಮೂಲಕ 40 ರಿಂದ 50 ಅಡಿ ಎತ್ತರದ ಪಿಲ್ಲರ್ ಬಳಿ ಕಾಂಕ್ರೀಟ್ ಬ್ಲಾಕ್ಗಳನ್ನು ಎತ್ತಿ ಇಡಲು ಸಾಧ್ಯವಾಗುತ್ತಿಲ್ಲ. ಡ್ಯಾಂನ ನೀರಿನ ಮಟ್ಟ ಏರಿದರೆ ಮಾತ್ರ ಕೆಲಸ ಮಾಡಲು ಸಾಧ್ಯ. ಇಲ್ಲದಿದ್ದರೆ 2024ರ ನವೆಂಬರ್ನೊಳಗೆ ಕೆಲಸ ಪೂರ್ಣಗೊಳ್ಳುವುದು ಅಸಾಧ್ಯವಾಗಲಿದೆ.
ಇನ್ನು 2020ರ ಡಿಸೆಂಬರ್‌ನಲ್ಲಿ ಆರಂಭವಾಗಿರುವ ಕೆಲಸ ಶೇ.60 ರಷ್ಟು ಮುಗಿದಿದೆ. ಗುತ್ತಿಗೆ ಕರಾರಿನ ಪ್ರಕಾರ 2024ರ ನವೆಂಬರ್ನೊಳಗೆ ಸೇತುವೆ ಕೆಲಸ ಪೂರ್ಣಗೊಳ್ಳಬೇಕು. ಪ್ರಸ್ತುತ ಪಿಲ್ಲರ್ಗಳ ನಡುವೆ ಸುಮಾರು 80 ರಿಂದ 100 ಟನ್ ತೂಕದ ಸೆಗ್ಮೆಂಟ್ನ್ನು ಜೋಡಿಸುವ ಕೆಲಸವಾಗಿದೆ. ಆದರೆ ಜಲಾಶಯದಲ್ಲಿ ನೀರಿನ ಕೊರತೆಯ ಕಾರಣದಿಂದ ಕೆಲಸಕ್ಕೆ ಹಿನ್ನಡೆಯುಂಟಾಗಿದೆ. ನೀರು ಬಂದರೆ ವಾರಕ್ಕೆ ಕನಿಷ್ಠ 4 ರಿಂದ 5 ಸೆಗ್ಮೆಂಟ್ನ್ನು ಜೋಡಿಸಬಹುದಾಗಿದೆ. ಡ್ಯಾಂಗೆ ಹೆಚ್ಚಿನ ನೀರು ಬಂದರೆ ನಮಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಹೇಳುತ್ತಾರೆ.
ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಣೆ ಬಂದ್: ಮುಂಗಾರು ಮಳೆ ವಿಳಂಬ ವಾಗಿರುವ ಹಿನ್ನೆಲೆ ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಕುಸಿದಿದೆ. ಮುಂಜಾಗ್ರತ ಕ್ರಮವಾಗಿ ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಣೆಯನ್ನು ನಿರ್ಬಂಧಿಸಲಾಗಿದೆ. ಲಾಂಚ್‌ನಲ್ಲಿ ಬಸ್, ಕಾರು ಸೇರಿದಂತೆ ವಾಹನ ಸಾಗಣೆ ಸಂಪೂರ್ಣ ನಿಲ್ಲಿಸಲಾಗಿದ್ದು, ಈಗ ಕೇವಲ ಪ್ರವಾಸಿಗರನ್ನು ಹಾಗೂ ಭಕ್ತರನ್ನು ಮಾತ್ರ ಲಾಂಚ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಒಟ್ಟಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ನೀರಿನ ಅಭಾವವಷ್ಟೇ ಅಲ್ಲದೆ, ಅಭಿವೃದ್ಧಿ ಕೆಲಸಗಳಿಗೂ ಹಿನ್ನಡೆಯಾಗುತ್ತಿದ್ದು, ವರುಣನ ಕೃಪೆಯಿಂದ ಮಳೆಯಾಗಿ ಸಿಗಂದೂರು ಸೇತುವೆ ಕೆಲಸಕ್ಕೆ ಅನುಕೂಲವಾಗಲಿ ಎಂದು ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಮುಂಗಾರು ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ.. ಊರಿಗೆಲ್ಲಾ ಊಟ!