ಶಿವಮೊಗ್ಗ :ಕೆ ಎಸ್ ಈಶ್ವರಪ್ಪನವರು ನಾಯಿ ಹಾಲಿದ್ದಂತೆ. ಅವರ ಮಗನನ್ನು ಬಿಟ್ಟು ಅವರು ಬೇರೆ ಯಾರಿಗೂ ಅಧಿಕಾರ ಕೊಡಿಸುವುದಿಲ್ಲ ಎಂದು ಕೆಪಿಸಿಸಿ ನೂತನ ವಕ್ತಾರ ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವರ ಆಡಳಿತ ವೈಖರಿಯನ್ನು ಈ ರೀತಿ ಕಿಚಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆಗಳ ತಿದ್ದುಪಡಿ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಅವರ ಮಕ್ಕಳು, ಆರ್. ಅಶೋಕ್ ಅವರಂತಹ ಸಚಿವರು, ಕಾರ್ಪೊರೇಟ್ ಕಂಪನಿಗಳ ಗುಲಾಮರಾಗಿದ್ದಾರೆ. ಯಡಿಯೂರಪ್ಪನವರು ರಾಜ್ಯದ ರೈತ ನಾಯಕ ಅಂತಾ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರು ರೈತರ ನಾಯಕರಲ್ಲ, ಮಂಡ್ಯದಿಂದ ರೈತರು ಬೆಳೆದ ನಿಂಬೆಹಣ್ಣು ಮಾರಲು ಬಂದವರು. ಇಂದು ಕಾರ್ಪೊರೇಟ್ ಕಂಪನಿಗಳ ಗುಲಾಮರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ 24 ಗಂಟೆಗಳಲ್ಲಿ ಗೋ ಹತ್ಯೆ ನಿಷೇಧ ಮಾಡುತ್ತೇವೆ ಎಂದು ವಾಗ್ಧಾನ ಮಾಡಿದ್ದರು. ಆದರೆ, ಆಡಳಿತಕ್ಕೆ ಬಂದು ಇಷ್ಟು ದಿನಗಳಾದ್ರೂ ನಿಷೇಧ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಗೋಹತ್ಯೆ ಮಾಡಲು ಇವರಿಗೆ ಇಷ್ಟವಿಲ್ಲ, ಅಲ್ಲಲ್ಲಿ ದೊಂಬಿಯಾಗಬೇಕು, ಗಲಾಟೆ ಯಾಗಬೇಕು, ಮುಂದೆ ಇದರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು.