ಶಿವಮೊಗ್ಗ: ರಾಜ್ಯದ ಬಿಜೆಪಿ ಸರ್ಕಾರಕ್ಕೆ ಸೆಡ್ಡು ಹೊಡೆದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದ್ದಾರೆ.
ಸರ್ಕಾರಕ್ಕೆ ಸೆಡ್ಡು ಹೊಡೆದು ತೀರ್ಥಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದ ಕಿಮ್ಮನೆ ರತ್ನಾಕರ್ - Indira canteen at theerthahalli
ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆಯುವವರೆಗೂ ತಾವೇ ಇಂದಿರಾ ಕ್ಯಾಂಟೀನ್ ನಡೆಸುವುದಾಗಿ ಹೇಳಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿಯಲ್ಲಿ ತಾವೇ ಇಂದಿರಾ ಕ್ಯಾಂಟೀನ್ ತೆರೆದಿದ್ದಾರೆ.
ಇಂದು ಬೆಳಗ್ಗೆಯಿಂದ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಬಡವರ, ಕೂಲಿ ಕಾರ್ಮಿಕರ ಅನುಕೂಲಕ್ಕೆ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಲಾಗಿತ್ತು. ಕೊರೊನಾ ಲಾಕ್ಡೌನ್ನಲ್ಲಿ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರವೇ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದೆ. ಆದರೆ, ತೀರ್ಥಹಳ್ಳಿಯಲ್ಲಿ ಇನ್ನೂ ಇಂದಿರಾ ಕ್ಯಾಂಟೀನ್ಗೆ ಜಾಗ ಗುರುತಿಸದೇ ನಿರ್ಮಾಣ ಮಾಡದ ಕಾರಣ ಇಂದಿರಾ ಕ್ಯಾಂಟೀನ್ ತೆರೆದಿರಲಿಲ್ಲ.
ತೀರ್ಥಹಳ್ಳಿ ಶಾಸಕರು ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯದೇ ಇರುವುದನ್ನು ಖಂಡಿಸಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಸಮಾನ ಮನಸ್ಕರನ್ನು ಸೇರಿಸಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿದ್ದಾರೆ. ಬೆಳಗ್ಗೆ 50 ಜನ ಹಾಗೂ ಮಧ್ಯಾಹ್ನ 100 ಕ್ಕೂ ಅಧಿಕ ಮಂದಿ ಊಟ ಮಾಡಿದ್ದಾರೆ. ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆಯುವವರೆಗೂ ನಾವೇ ಇಂದಿರಾ ಕ್ಯಾಂಟೀನ್ ನಡೆಸುವುದಾಗಿ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ಈ ವೇಳೆ, ಮುಖಂಡರಾದ ಸುರೇಶ್ ಅಮ್ರಪಾಲಿ, ರಾಘವೇಂದ್ರ, ಪದ್ಮನಾಭ್ ಸೇರಿದಂತೆ ಇತರಿದ್ದರು.