ಕರ್ನಾಟಕ

karnataka

By

Published : Nov 5, 2019, 8:39 PM IST

ETV Bharat / state

ಶಿವಮೊಗ್ಗದಲ್ಲಿ ಕಾಂಗ್ರೆಸ್​ ಚೈತನ್ಯ ಸಮಾವೇಶ: ಬಿಎಸ್​ವೈ ವಿರುದ್ಧ ಸಿದ್ದರಾಮಯ್ಯ ಗುಡುಗು

ಯಡಿಯೂರಪ್ಪನವರೇ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್​ ಕುರಿತಾದ ಪಾಠ ತೆಗೆದುಹಾಕಲು ಹೊರಟಿದ್ದೀರಿ. ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್ ಅಂದ್ರೆ​ ಇದೇನಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇನ್ನು ಟಿಪ್ಪು ಮತಾಂಧ ಎನ್ನುತ್ತೀರಿ. ಆದ್ರೆ ಈ ಹಿಂದೆ ಕೆಜೆಪಿಯಲ್ಲಿದ್ದಾಗ ಟಿಪ್ಪು ದೇಶಭಕ್ತ, ಬ್ರಿಟಿಷರ ವಿರುದ್ಧ ಹೋರಾಡಿದ್ದ ಮಹಾನ್​ ವೀರ ಎಂದಿದ್ರಿ, ಆದರೀಗ ಮತಾಂಧ ಎನ್ನುತ್ತೀರಿ. ನಿಮಗೇನು ಎರಡು ನಾಲಿಗೆ ಇವೆಯಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ

ಶಿವಮೊಗ್ಗ:ರಾಜ್ಯದಲ್ಲಿ ಯಡಿಯೂರಪ್ಪ ಅವರದ್ದು ಜನಾದೇಶ ಇಲ್ಲದ ಸರ್ಕಾರ. ಆಪರೇಷನ್​ ಕಮಲದ ಮೂಲಕ ಪಕ್ಷೇತರರ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದು, ಹಿಂಬಾಗಿಲಿನಿಂದ ಬಂದು ಸಿಎಂ ಕುರ್ಚಿ ಏರಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಚೈತನ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೀಡಿದ್ದ ಭರವಸೆಗಳನ್ನೆಲ್ಲ ಈಡೇರಿಸಿದ್ದು ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್​ ಸರ್ಕಾರ. ಯಡಿಯೂರಪ್ಪನವರು ತಮಗೆ ಜನಾಶೀರ್ವಾದ ಇದೆ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದ್ರೆ ಅವರು ಕಾಂಗ್ರೆಸ್​ ಹಾಗೂ ಜೆಡಿಎಸ್​ ಎಂಎಲ್​ಎಗಳಿಗೆ ಹಣ ಕೊಟ್ಟು, ಅಧಿಕಾರದ ಆಸೆ ತೋರಿಸಿ ಸಿಎಂ ಆಗಿದ್ದಾರೆ. ಆಪರೇಷನ್​ ಕಮಲದ ಬಗ್ಗೆ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಸ್ವತಃ ಯಡಿಯೂರಪ್ಪನವರೇ ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದರು.

ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಚೈತನ್ಯ ಸಮಾವೇಶ

17 ಶಾಸಕರಿಗೆ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಬೀಳಿಸುವುದು ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಕೇಂದ್ರದ ಸಚಿವ ಅಮಿತ್​ ಶಾ ಹಾಗೂ ಸಿಎಂ ಯಡಿಯೂರಪ್ಪ ಸೇರಿಕೊಂಡು ಸಂವಿಧಾನದ ಉದ್ದೇಶಗಳನ್ನು ನಾಶಮಾಡಲು ಹೊರಟಿದ್ದೀರಿ. ನಿಮಗೆ ಅಧಿಕಾರದಲ್ಲಿರುವ ನೈತಿಕತೆ ಇಲ್ಲವೆಂದು ಸಿದ್ದರಾಮಯ್ಯ ಗುಡುಗಿದರು.

ಯಡಿಯೂರಪ್ಪನವರೇ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್​ ಕುರಿತಾದ ಪಾಠ ತೆಗೆದುಹಾಕಲು ಹೊರಟಿದ್ದೀರಿ. ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್ ಅಂದ್ರೆ​ ಇದೇನಾ? ಟಿಪ್ಪು ಮತಾಂಧ ಎನ್ನುತ್ತೀರಿ. ಆದರೆ ಈ ಹಿಂದೆ ಕೆಜೆಪಿಯಲ್ಲಿದ್ದಾಗ ಟಿಪ್ಪು ದೇಶಭಕ್ತ, ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್​ ವೀರ ಎಂದಿದ್ರಿ, ಆದರೀಗ ಮತಾಂಧ ಎನ್ನುತ್ತೀರಿ. ನಿಮಗೇನು ಎರಡು ನಾಲಿಗೆ ಇವೆಯಾ? ಎಂದು ಪ್ರಶ್ನಿಸಿದ್ದಾರೆ.

ಗುಂಡೂರಾವ್ ಆಕ್ರೋಶ:

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಐಟಿಯನ್ನು ಛೂ ಬಿಟ್ಟಿರುವ ಬಿಜೆಪಿಯವರು ಆಸ್ತಿ ಮಾಡಿಕೊಂಡಿಲ್ಲವೇ? ಶಿವಮೊಗ್ಗದ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪನವರ ಹತ್ತಿರ ಹಣ ಇಲ್ಲವೇ? ಅವರ ಆಸ್ತಿ ಮತ್ತು ಹಣವನ್ನು ತನಿಖೆ ಮಾಡಲ್ಲವೇ? ಅವರನ್ನೇಕೆ ಬಿಡುತ್ತೀರಾ. ಐಟಿಯವರ ಕಣ್ಣಿಗೆ ಕೇವಲ ಕಾಂಗ್ರೆಸ್ ನಾಯಕರು ಮಾತ್ರ ಕಾಣಿಸುತ್ತಾರೆಯೇ? ಬಿಜೆಪಿ ಅಧಿಕಾರಕ್ಕಾಗಿ ಹಪಹಪಿಸಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಇಂತಹ ನೀಚ ಕೆಲಸಕ್ಕೆ ಕೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ನಾಯಕತ್ವದ ಬಿಜೆಪಿ ಸರ್ಕಾರದಲ್ಲಿ ಆರ್ಥಿಕ ನೀತಿಗಳೇ ಕುಸಿದುಹೋಗಿವೆ. ನಿರುದ್ಯೋಗ ಹೆಚ್ಚಾಗಿದೆ. ಬಿಜೆಪಿ ಅಕಾರಕ್ಕೆ ಬಂದ 5 ವರ್ಷಗಳಲ್ಲಿ 2 ಕೋಟಿ ಉದ್ಯೋಗ ನಷ್ಟವಾಗಿದೆ. ಅನೇಕ ಕಂಪನಿಗಳು, ಕೈಗಾರಿಕೆಗಳು ಮುಚ್ಚಿದ್ದರಿಂದ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ ಯಾವಾಗಲೂ ಬಂದಿರಲಿಲ್ಲ. ಇದರ ಸಂಪೂರ್ಣ ಹೊಣೆಗಾರಿಕೆ ಪ್ರಧಾನಿ ಮೋದಿಯವರದ್ದೇ ಆಗಿದೆ ಎಂದರು.

ABOUT THE AUTHOR

...view details