ಶಿವಮೊಗ್ಗ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಘನತ್ಯಾಜ್ಯ ಘಟಕ ಸ್ಥಾಪಿಸಲು ಜನವರಿ ಅಂತ್ಯದ ಒಳಗಾಗಿ ಭೂಮಿ ಗುರುತಿಸಿ ಅಂತಿಮಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿಲ್ಲೆಯ 271 ಗ್ರಾಮ ಪಂಚಾಯತ್‍ಗಳ ಪೈಕಿ ನಾಲ್ಕು ಗ್ರಾಮ ಪಂಚಾಯತ್‍ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭ ಮಾಡಿದ್ದು, ಇನ್ನು 17 ಗ್ರಾಪಂ ವ್ಯಾಪ್ತಿಗಳಲ್ಲಿ ಜಮೀನು ಗುರುತಿಸಿ ಅನುಮತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಈ ಕಾರ್ಯ ಪ್ರಗತಿಯಾಗಿದ್ದು, ನಮ್ಮ ಜಿಲ್ಲೆಯಲ್ಲಿ ತಿಂಗಳ ಅಂತ್ಯದ ಒಳಗಾಗಿ ಜಮೀನು ಗುರುತಿಸಿ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ
ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ 2ರಿಂದ 5 ಎಕರೆ ಜಮೀನು ಅಗತ್ಯವಿದೆ. ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ಪ್ರತಿ ಗ್ರಾಮ ಪಂಚಾಯತ್‍ಗಳಿಗೆ 20 ಲಕ್ಷ ರೂ. ಅನುದಾನ ಈಗಾಗಲೇ ಒದಗಿಸಿದೆ. ಸೂಕ್ತ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ಮೂರು ನಾಲ್ಕು ಗ್ರಾಮ ಪಂಚಾಯತ್‍ಗಳು ಕ್ಲಸ್ಟರ್ ಮಾದರಿಯಲ್ಲಿ ಘಟಕಗಳನ್ನು ಸ್ಥಾಪಿಸಬಹುದಾಗಿದೆ. ಘನ ತ್ಯಾಜ್ಯ ಘಟಕಗಳನ್ನು ಆದಷ್ಟು ಬೇಗನೆ ಸ್ಥಾಪಿಸಲು ಭೂಮಿ ಒದಗಿಸಲು ತಹಶೀಲ್ದಾರ್ಗಳು ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ