ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಮಾತನಾಡಿದರು. ಶಿವಮೊಗ್ಗ:ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬರಲಿ, ನಾನೇ ಅವರಿಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗಿ ಪ್ರಚಾರ ನಡೆಸಿದ್ದರೂ ಅಲ್ಲೆಲ್ಲಿ ಕಾಂಗ್ರೆಸ್ ಸೋತಿದೆ. ಅದೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಮಾಡಿದ ಕಡೆಯೆಲ್ಲಾ ಬಿಜೆಪಿ ಗೆದ್ದಿದೆ. ಇದರಿಂದ ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬರಲಿ, ಬಂದು ಪ್ರಚಾರ ನಡೆಸಿ, ನಮ್ಮ ಅಭ್ಯರ್ಥಿ ಚನ್ನಬಸಪ್ಪರನ್ನು ಗೆಲ್ಲಿಸಲಿ ಎಂದರು.
ಲಿಂಗಾಯತ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಮಾಡಿದಷ್ಟು ದ್ರೋಹವನ್ನು ಬೇರೆ ಯಾರೂ ಮಾಡಿಲ್ಲ. ಲಿಂಗಾಯತರಿಗೆ ಮಾಡಿದ ದ್ರೋಹದಿಂದಾಗಿ ಸಿದ್ದರಾಮಯ್ಯ ತಮ್ಮ ಸರ್ಕಾರವನ್ನು ಕಳೆದುಕೊಂಡರು. ಸಿದ್ದರಾಮಯ್ಯ ಅವರು ಮಾಡಿದ ತಪ್ಪನ್ನು ವರುಣಾದಲ್ಲಿ ಈ ಬಾರಿ ಅನುಭವಿಸುತ್ತಾರೆ. ರಾಜ್ಯದ ಜನ ಜಾತಿ ರಾಜಕಾರಣಕ್ಕೆ ಬೆಂಬಲಿಸಲ್ಲ, ಅವರು ರಾಷ್ಟ್ರೀಯ ವಿಚಾರಕ್ಕೆ ಬೆಂಬಲ ಕೊಡುತ್ತಾರೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಡಿಕೆಶಿಯಿಂದ ಜಾತಿ ರಾಜಕಾರಣ: ಈ ಬಾರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇಬ್ಬರು ಸೋಲುತ್ತಾರೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಯಾರು ಜಾತಿ ರಾಜಕಾರಣ ಮಾಡಲ್ಲ. ಸಿದ್ದರಾಮಯ್ಯ ಮೊದಲು ಎಂಎಲ್ಎ ಸ್ಥಾನ ಗೆದ್ದು ಬರಲಿ, ಆಮೇಲೆ ಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತನಾಡಲಿ ಎಂದು ಈಶ್ವರಪ್ಪ ಸವಾಲ್ ಹಾಕಿದರು.
ಸಿದ್ದರಾಮಯ್ಯರಿಂದ ಅವಕಾಶವಾದಿ ರಾಜಕಾರಣ: ಸಿದ್ದರಾಮಯ್ಯನವರು ಯಾವ ಸಂದರ್ಭದಲ್ಲಿ ಏನು ಬೇಕಾದರೂ ಮಾತನಾಡಬಹುದು. ಅವರ ದುರಂಹಕಾರದಿಂದಾಗಿ ಹಿಂದಿನ ಬಾರಿ ಚಾಮುಂಡೇಶ್ವರಿಯಲ್ಲಿ ಸೋತರು. ಅದೇಗೋ ಬಾದಾಮಿಯಲ್ಲಿ ನಿಂತು ಗೆದ್ದರು. ಈ ಬಾರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ವರುಣಾ ಜನ ಈ ಬಾರಿಯೂ ಸೋಲಿಸಿ ಮನೆಗೆ ಕಳುಹಿಸುತ್ತಾರೆ. ಕಳೆದ ಬಾರಿ ಕಾಂಗ್ರೆಸ್ ಗೆ ವಿರೋಧ ಪಕ್ಷ ಸ್ಥಾನವಾದರೂ ಸಿಕ್ಕಿತ್ತು. ಈ ಬಾರಿ ಅದು ಸಿಗುವುದಿಲ್ಲ ಎಂದು ವ್ಯಂಗ್ಯವಾಗಿ ಟೀಕಿಸಿದರು.
ಆಯನೂರು ಮಂಜುನಾಥ್ ಬಗ್ಗೆ ಮೃದು ಧೋರಣೆ ಇಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್ ಮಾತನಾಡಿ,ಜಿಲ್ಲಾ ಬಿಜೆಪಿ ಆಯನೂರು ಮಂಜುನಾಥ್ ಬಗ್ಗೆ ಯಾವುದೇ ಮೃದು ಧೋರಣೆಯನ್ನು ಹೊಂದಿಲ್ಲ. ಅವರು ಮೊದಲ ಸಲ ಫ್ಲೆಕ್ಸ್ ಹಾಕಿದ ವೇಳೆ ನಗರ ಸಮಿತಿ ಸೂಕ್ಷ್ಮವಾಗಿ ಗಮನಿಸಿತು. ನಂತರ ಜಿಲ್ಲಾ ಸಮಿತಿಗೆ ವರದಿಯನ್ನು ಸಲ್ಲಿಸಿದೆ. ಅವರು ಶಾಸಕರಾದ ಕಾರಣ ಅವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಸಮಿತಿಗೆ ಅಧಿಕಾರವಿಲ್ಲ. ಇದರಿಂದ ರಾಜ್ಯ ಸಮಿತಿ ಕ್ರಮ ತೆಗೆದುಕೊಂಡಿದೆ ಎಂದರು.
ಇನ್ನೂ ಸೊರಬದಲ್ಲಿ ನಮೋ ವೇದಿಕೆಯು ನಮ್ಮ ಮನವಿಗೆ ಅವರು ಅಭ್ಯರ್ಥಿಯನ್ನು ಹಾಕಿಲ್ಲ. ಮುಂದೆ ಎಲ್ಲವೂ ಸರಿ ಆಗುತ್ತದೆ. ಇನ್ನು ಸಾಗರದಲ್ಲಿ ಚೇತನ ರಾಜ್ ಕಣ್ಣೂರು ಅವರು ಪಕ್ಷ ಬಿಟ್ಟು ಹೋಗಿದ್ದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಅವರು ಆನಂದಪುರಂ ಭಾಗದ ಹಿರಿಯ ರತ್ನಾಕರ್ ಹುನಗೋಡು ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಪಕ್ಷ ಬಿಟ್ಟಿದ್ದಾರೆ. ಅವರಿಗೆ ಪಕ್ಷ ಮುಂದಿನ ಜಿ.ಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿತ್ತು. ಅವಸರದಲ್ಲಿ ಅವರು ಬಿಟ್ಟಿದ್ದಾರೆ ಎಂದು ಈಶ್ವರಪ್ಪ ಹೇಳಿದ್ರು.
ಇದನ್ನೂಓದಿ:ರಾಹುಲ್ ಗಾಂಧಿ ಜೊತೆ ಜಗದೀಶ್ ಶೆಟ್ಟರ್ ಚರ್ಚೆ: ನಾಗಪುರ ತಂಡ ನನ್ನ ಚಲನವಲನ ತಿಳಿಯುವ ಮುನ್ನ ಚುನಾವಣೆ ಮುಗಿದಿರುತ್ತೆ ಎಂದ ಮಾಜಿ ಸಿಎಂ