ಶಿವಮೊಗ್ಗ: ಪಂಚಮಸಾಲಿ, ಒಕ್ಕಲಿಗರ ಮೀಸಲಾತಿ ಬಗ್ಗೆ ತೀರ್ಮಾನ ಮಾಡಲಾಗಿದೆ. ಆ ಬಗ್ಗೆ ವಿಸ್ತೃತ ಚರ್ಚೆ ನಡೆದು, ಸ್ಪಷ್ಟತೆ ಸಿಗಲಿದೆ. ಈಗಲೇ ಮದುವೆಯಾಗಿದೆ, ಆಗಲೇ ಮಕ್ಕಳಾಗಿಲ್ಲ ಅಂದ್ರೆ ಹೇಗೆ ಎಂದು ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನೀಡುವ ಮೀಸಲಾತಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಪ್ರಸ್ತಾವನೆ ಕೇಂದ್ರಕ್ಕೆ ರವಾನೆಯಾಗುತ್ತದೆ. ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಲಿದೆ ಎಂದರು. ಮೀಸಲಾತಿ ವಿಚಾರದಲ್ಲಿ ಬಿಜೆಪಿಯವರು ಮರಳು ಮಾಡುತ್ತಿದ್ದಾರೆ ಎಂಬ ಹೆಚ್ಡಿಕೆ ಆರೋಪದ ಕುರಿತು ಮಾತನಾಡಿದ ಅವರು, ಇದು ಮೊದಲ ಹೆಜ್ಜೆ, ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಯಾಕೆ ವಿರೋಧ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಮೀಸಲಾತಿ ಕೊಡಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯ ನಮಗೆ ಸಲಹೆ ನೀಡಬೇಕು ಎಂದರು.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಬಸವಪ್ರಭು ಸ್ವಾಮೀಜಿ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಮೀಜಿ ಅವರೇ ಕರೆದುಕೊಂಡು ಹೋಗಿ ಕೂರಿಸಲಿ. ಯಾರು ಬೇಡ ಎನ್ನುತ್ತಾರೆ, ಯಾರೋ ಒಬ್ಬ ಸ್ವಾಮೀಜಿ ಬಂದು ಹೇಳಿದರೆ ಆಗಲ್ಲ, ರಾಜ್ಯದ ಜನರು ಅದನ್ನು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
2ಎ ವರ್ಗದವರಿಗೆ ಅನ್ಯಾಯ ಆಗಬಾರದೆಂದು ಪ್ರತ್ಯೇಕ ಪ್ರವರ್ಗ ರಚಿಸಲಾಗಿದೆ. ಮೀಸಲಾತಿ ಕೊಡುವಲ್ಲಿ ಪ್ರತಿಪಕ್ಷಗಳು ಸಹಕರಿಸಬೇಕು. ಛೂಮಂತ್ರ ಮಾಡಿ ಮೀಸಲಾತಿ ಕೊಡಲು ಸಾಧ್ಯವೆ?. ಮೊದಲ ಹೆಜ್ಜೆ ಇಟ್ಟಿದ್ದೇವೆ, ಎಲ್ಲವೂ ಆಗುತ್ತೆ ಎಂದು ಹೇಳಿದರು. ಬಿಜೆಪಿ, ಕೆಜೆಪಿ ಒಡೆಯದಿದ್ದರೆ ಸಿದ್ದರಾಮಯ್ಯ ಸಿಎಂ ಆಗ್ತಿರಲಿಲ್ಲ. ಬಿಜೆಪಿ ಕೆಜೆಪಿಯಿಂದ ಕಾಂಗ್ರೆಸ್ಗೆ ಲಾಭವಾಯ್ತು. ಇನ್ನು, ಬಿಜೆಪಿ ಒಡೆಯುವ ಪ್ರಶ್ನೆಯಿಲ್ಲ. ಬಿಜೆಪಿ ಸಂಘಟನಾತ್ಮಕವಾಗಿ ಸಾಕಷ್ಟು ಬೆಳೆದಿದೆ ತಿಳಿಸಿದರು.
ನರೇಂದ್ರ ಮೋದಿಯವರ ನಾಯಕತ್ವ ಸಿಕ್ಕಿದೆ. ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಆಗಿವೆ. ಬಿಜೆಪಿಗೆ ಪೂರ್ಣ ಬಹುಮತ ಬರುತ್ತೆ. ರಾಜ್ಯದ ಜನ ಬಿಜೆಪಿ ಪರ ಇದ್ದಾರೆ. ಅಮಿತ್ ಶಾ ಪ್ರವಾಸ ಕುರಿತು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಬಂದು ಅಭಿವೃದ್ಧಿ ಮಾಡಲು ಆಗೋದಿಲ್ಲ. ರಾಹುಲ್ ಗಾಂಧಿ ಭಾರತ್ ಜೋಡೊ ಮಾಡಿದ್ದರಿಂದ ದೇಶ ಜೋಡಣೆ ಆಯ್ತಾ? ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿಗೆ ಒಮ್ಮೆ ದೇಶ ನೋಡುವ ಅವಕಾಶ ಸಿಕ್ತು, ಅದಕ್ಕೆ ನನಗೆ ಸಂತೋಷವಿದೆ. ಸ್ವಾತಂತ್ರ್ಯ ಬಂದ 70 ವರ್ಷದವರೆಗೂ ಭಾರತ ಜೋಡಿಸುವ ಕೆಲಸ ಕಾಂಗ್ರೆಸ್ ಮಾಡಿಲ್ಲ. ಭಾರತೀಯರ ಭಾವನೆ ಅರ್ಥ ಮಾಡಿಕೊಂಡಿಲ್ಲ ಎಂದರು.
ಅಮಿತ್ ಶಾ ಅವರು ಭಯೋತ್ಪಾದನೆ ನಿಗ್ರಹಕ್ಕೆ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಏಕೆ ಮಾಡಲಿಲ್ಲ?. ಡಿ.ಕೆ.ಶಿವಕುಮಾರ್ ಆವಾಗ ಯಾಕೆ ಬಾಯಿ ಮುಚ್ಚಿಕೊಂಡು ಕೂತಿದ್ರು?. ಅಮಿತ್ ಶಾ ಅವರು ದಿಟ್ಟ ಹೆಜ್ಜೆ ಇಟ್ಟು ಮುನ್ನುಗ್ಗುತ್ತಿದ್ದಾರೆ. ಪಾಕಿಸ್ತಾನ, ಚೀನಾ ನಮ್ಮ ದೇಶದ ತಂಟೆಗೆ ಅಷ್ಟು ಸುಲಭವಾಗಿ ಬರೊಲ್ಲ. ಇಡೀ ದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಆದ್ರೆ ಶಾಂತಿ ಹಾಳು ಮಾಡಲು ಡಿಕೆಶಿ ಭಯೋತ್ಪಾದಕರಿಗೆ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಮಿತ್ ಶಾ ಮಾಡುವ ಕೆಲಸ ಅವರೂ ಬೆಂಬಲಿಸಲಿ. ಆಗ ಅವರು ನಿಜವಾದ ರಾಷ್ಟ್ರ ಭಕ್ತರಾಗ್ತಾರೆ. ಇಲ್ಲಾಂದ್ರೆ ಭಯೋತ್ಪಾದಕರ ರಕ್ತ ನಿಮ್ಮ ಮೇಲೆ ಹರೀತಾಯಿದೆ ಅಂತ ರಾಜ್ಯದ ಜನ ತೀರ್ಮಾನಿಸುತ್ತಾರೆ. ಈಗ ಒಂದಿಷ್ಟು ಸೀಟ್ ಇದೆ, ಮುಂದಿನ ಚುನಾವಣೆಯಲ್ಲಿ ಜನ ನಿಮ್ಮನ್ನು ಕೂಡ ಭಯೋತ್ಪಾದಕರ ಜೊತೆ ಹೊರ ಹಾಕುತ್ತಾರೆ ಎಂದರು.
ನಾನು ಪಾಶ್ವಿಮಾತ್ಯರ ಹೊಸ ವರ್ಷ ಆಚರಣೆ ಮಾಡಲ್ಲ:ನಮಗೆ ಹೊಸ ವರ್ಷ ಯುಗಾದಿ, ಇದು ಕ್ರಿಶ್ಚಿಯನ್ನರ ಹಬ್ಬ, ಅವರು ಮಾಡಲಿ. ನಾವಂತೂ ಅಡ್ಡಿ ಮಾಡಲ್ಲ, ಆಚರಿಸುವುದೂ ಇಲ್ಲ ಎಂದರು.
ಇದನ್ನೂ ಓದಿ:ಪ್ರಧಾನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ.. ದೂರು ದಾಖಲು!