ಶಿವಮೊಗ್ಗ: ಕಾಂಗ್ರೆಸ್ಸಿಗರ ಎದೆ ನಡುಗಿಸುವಂತಹ ಪಟ್ಟಿಯನ್ನು ನಿನ್ನೆ ಬಿಜೆಪಿ ಬಿಡುಗಡೆ ಮಾಡಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಿನ್ನೆ ಬಿಜೆಪಿಯ ಕೇಂದ್ರದ ನಾಯಕರು 189 ಜನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಜನರ ಮನಸ್ಸನ್ನು ಗೆದ್ದು ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೆ ಎನ್ನುವ ಭರವಸೆ ಇದೆ ಎಂದರು.
ಬಿಜೆಪಿ ನಿಂತ ನೀರಲ್ಲ:ಬಿಜೆಪಿ ನಿಂತ ನೀರಲ್ಲ. ಇದರಲ್ಲಿ ಹೊಸಬರು ಬರ್ತಾರೆ, ಹಳಬರು ಇರುತ್ತಾರೆ. ಎಲ್ಲಾರಿಗೂ ಅನುಕೂಲವಾಗುವಂತಹ ಪಟ್ಟಿ ನಿನ್ನೆ ಬಿಡುಗಡೆ ಆಗಿದೆ. ನಮ್ಮ ಪಟ್ಟಿಯಲ್ಲಿ ಹಿಂದುಳಿದ ವರ್ಗದವರಿಗೆ ಆದ್ಯತೆ ಕೊಟ್ಟಿದ್ದಾರೆ. ನಮ್ಮ ಪಟ್ಟಿಯಲ್ಲಿ ವೈದ್ಯರು, ನಿವೃತ್ತ ಐಎಎಸ್ ಅಧಿಕಾರಿಗಳು, ನಿವೃತ್ತ ಸರ್ಕಾರಿ ನೌಕರರು ಇದ್ದಾರೆ. ಈ ಪಟ್ಟಿ ನೋಡಿ ನಮಗೆ ಸಂತೋಷವಾಗಿದೆ ಎಂದರು.
ಹಿರಿಯರಿಗೆ ಬೇಸರವಾಗಿರುವುದು ಸಹಜ:ನಮ್ಮ ಪಕ್ಷದ ಹಿರಿಯರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿ ಅನೇಕರಿಗೆ ಟಿಕೆಟ್ ಘೋಷಣೆ ಆಗದೇ ಇರುವುದು ಬೇಸರ ತಂದಿದೆ. ಬಿಜೆಪಿಯಲ್ಲಿ ಮಾತ್ರ ಹಿರಿಯರು ಎಲ್ಲರನ್ನು ಕರೆದು ಸಮಾಧಾನ ಪಡಿಸುವ ವ್ಯವಸ್ಥೆ ಇದೆ. ಕೇಂದ್ರದ ನಾಯಕರು ಜಗದೀಶ್ ಶೆಟ್ಟರ್ ಹಾಗೂ ಸವದಿ ಅವರನ್ನು ಕರೆದು ಮಾತನಾಡಿಸುತ್ತಾರೆ ಎಂದರು. ಬಳಿಕ ಬೆಂಗಳೂರಿಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಯಾರು ಬೆಂಗಳೂರಿಗೆ ಕರೆದಿಲ್ಲ. ನಾನು ಬೆಂಗಳೂರಿಗೆ ಹೋಗಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.