ಶಿವಮೊಗ್ಗ:ಬಿಜೆಪಿ ನಮ್ಮ ತಾಯಿ ಇದ್ದಂತೆ. ಹಿಂದೂ ಧರ್ಮದ ತಳಹದಿಯ ಮೇಲೆ ಭಾರತಾಂಬೆಯನ್ನು ಶ್ರೇಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕಲ್ಪನೆ ಇರುವ ಏಕೈಕ ಪಕ್ಷ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ದೊಡ್ಡವರ ಬಗ್ಗೆ ಮಾತನಾಡಲು ಇಷ್ಟಪಡಲ್ಲ. ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ ಎಂದರು.
ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರಮಟ್ಟದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ನಡ್ಡಾ ಅವರು ಹೇಳ್ತಾರೆ ನಾವು ಕೂಡಾ ಸಾಮಾನ್ಯ ಕಾರ್ಯಕರ್ತರು ಎಂದು. ಹೀಗಾಗಿ ಭಾರತಾಂಬೆ, ಬಿಜೆಪಿ ನಮ್ಮ ತಾಯಿ ಎಂಬ ಭಾವನೆಯಲ್ಲಿಯೇ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ಇದರ ವಿಚಾರ, ಸಿದ್ಧಾಂತವೇ ದೇಶ ಮತ್ತು ಧರ್ಮವನ್ನು ಅಭಿವೃದ್ದಿಪಡಿಸುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಂದ ಹಿಡಿದು ಪ್ರಧಾನಿವರೆಗೂ ಅವಕಾಶ ಸಿಕ್ಕವರು ಚುನಾಯಿತ ಪ್ರತಿನಿಧಿಯಾಗ್ತಾರೆ. ಆದರೆ ಚುನಾಯಿತ ಪ್ರತಿನಿಧಿಯೇ ವಿಶೇಷ ಅಲ್ಲ. ಸಾಮಾನ್ಯ ಕಾರ್ಯಕರ್ತನೂ ಕೂಡ ಯಾವುದೇ ಸ್ಥಾನಕ್ಕೆ ಹೋಗಬಹುದು ಎಂದು ಬಿಜೆಪಿ ತೋರಿಸಿಕೊಟ್ಟಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿದಂತೆ ಬಿಜೆಪಿ ಬಿಡುವವರ ಬಗ್ಗೆ ನಾನು ಟೀಕೆ ಮಾಡಲ್ಲ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಹೋಗುವವರ ಮನವೊಲಿಸಿ ತಡೆಯಬೇಕು. ತಾಯಿಯನ್ನು ಒದ್ದು ಹೋಗೋದು ಸರಿಯಲ್ಲ ಎಂದು ಹೇಳಿದರು.
ನನಗೆ ಅನುಕೂಲ ಆದಾಗ ಸಿದ್ದಾಂತ, ವಿಚಾರವನ್ನು ಹೊಗಳೋದು, ತೊಂದರೆಯಾದಾಗ ಬಿಡುವ ಪದ್ಧತಿ ಒಳ್ಳೆಯದಲ್ಲ. ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಪಕ್ಷ ನಿಂತಿಲ್ಲ. ವಿಚಾರ- ಸಿದ್ದಾಂತದ ಮೇಲೆ ಬಿಜೆಪಿ ನಿಂತಿದೆ. ಕಾಂಗ್ರೆಸ್ಗೆ ಯಾವುದೇ ವಿಚಾರ- ಸಿದ್ದಾಂತಗಳಿಲ್ಲ ಎಂದು ಟೀಕಿಸಿದರು.