ಶಿವಮೊಗ್ಗ:'' ಅಂತಹ ಸಂದರ್ಭ ಬಂದರೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ನಾವು ಜೈಲಿಗೆ ಹಾಕುವವರೇ, ಆದರೆ ಅದೆಲ್ಲದಕ್ಕೂ ಸಮಯ ಬರಬೇಕು. ಎಲ್ಲವನ್ನು ಒಂದೇ ಸಲ ಮಾಡಲು ಆಗಲ್ಲ'' ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು. ಇಲ್ಲಿನ ಪ್ರೆಸ್ಟ್ರಸ್ಟ್ನಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ''ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಹಗರಣದಲ್ಲಿ ಭಾಗಿದ್ದಾರೆ ಎಂದು ನ್ಯಾಯಮೂರ್ತಿ ಕೆಂಪಣ್ಣನವರು ವರದಿ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಈಗ ಜಾಮೀನಿನ ಮೇಲೆ ಇದ್ದಾರೆ. ಅವರು ಯಾವಾಗ ಒಳಗೆ ಹೋಗ್ತಾರೆ ಗೊತ್ತಿಲ್ಲ'' ಎಂದರು.
ಸುರ್ಜೆವಾಲಾ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ:ಸುರ್ಜೆವಾಲಾ ಅವರಿಗೆ ದೇಶದ ಕಾನೂನಿನ ಬಗ್ಗೆ ಗೌರವ ಇಲ್ಲ ಎಂದೆನ್ನಿಸುತ್ತದೆ. ಸಂತೋಷ್ ಪಾಟೀಲ ಸಾವಿನ ವಿಚಾರ ಬಂದಾಗ ನಾನು ರಾಜೀನಾಮೆ ಘೋಷಣೆ ಮಾಡಿದೆ. ಅಮಿತ್ ಷಾ ಅವರು ರಾಜೀನಾಮೆ ನೀಡಿ ಎಂದು ಹೇಳಿದರು. ಸಂತೋಷ್ ಸಾವಿನ ವಿಚಾರದಲ್ಲಿ ನನಗೆ ಕ್ಲೀನ್ ಚಿಟ್ ನೀಡಿದೆ. ಕಾಂಗ್ರೆಸ್ನವರು ಕ್ಲೀನ್ ಚಿಟ್ ಬಂದ ಮೇಲೆ ರಾಜಕೀಯ ಮಾಡಲು ಈಗ ಟೀಕೆ ಮಾಡುವುದು ಸರಿಯಲ್ಲ. ಮೋದಿ ವಿಚಾರದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದೆ. ಅದರ ಬಗ್ಗೆ ನೀವು ಪ್ರತಿಭಟನೆ ನಡೆಸುತ್ತಿರಿ. ಆದರೆ, ನನಗೆ ಕ್ಲೀನ್ ಚೀಟ್ ನೀಡಿದ ಮೇಲೆ ಮಾತನಾಡುವುದು ಎಷ್ಟು ಸರಿ ಎಂದು ಸುರ್ಜೆವಾಲಾ ಅವರಿಗೆ ತೀರುಗೇಟು ನೀಡಿದರು.
ಜಗದೀಶ್ ಶಟ್ಟರ್ ಪಕ್ಷ ಬಿಟ್ಟಿದ್ದು ಆಘಾತ:ಜಗದೀಶ್ ಶಟ್ಟರ್ ಅವರು ನಮ್ಮ ಪಕ್ಷವನ್ನು ಬಿಟ್ಟಿದ್ದು ನನಗೆ ಅಘಾತವನ್ನುಂಟು ಮಾಡಿತ್ತು. ನಂತರ ನಾನು ಶೆಟ್ಟರ್ಗೆ ಬಹಿರಂಗ ಪತ್ರ ಬರೆದಿದ್ದೆ ಎಂದರು.
ಪಕ್ಷದ ಹಿರಿಯರು ಹೇಳಿದಂತೆ ಚುನಾವಣಾ ಕಣದಿಂದ ಹಿಂದಕ್ಕೆ:ನಮ್ಮ ಕೇಂದ್ರದ ನಾಯಕರಾದ ಧರ್ಮೆಂದ್ರ ಪ್ರಧಾನ್, ಸಂತೋಷ್ ಜೀ ಹಾಗೂ ನಡ್ಡಾ ಅವರು ನನಗೆ ಚುನಾವಣೆ ನಿಲ್ಲುವುದು ಬೇಡ ಅಂದ್ರು ನಾನು, ಅದನ್ನೇ ಮಾಡಿದೆ. ಪತ್ರವನ್ನು ನಾನು ಬಿಡುಗಡೆ ಮಾಡಲಿಲ್ಲ. ಕೇಂದ್ರದವರು ಪತ್ರ ಬಹಿರಂಗ ಮಾಡಿದ್ದರು. ಇದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರಿಗೆ ನಾನು ಸಮಾಧಾನ ಮಾಡಿದೆ. ಕೇಂದ್ರದ ನಾಯಕರಿಗೆ ನಾನು ರಾಜೀನಾಮೆ ನೀಡಿದ್ದು, ಕಾರ್ಯಕರ್ತರಿಗೆ ಸಮಾಧಾನ ಮಾಡಿದ್ದು, ಪಕ್ಷ ಸೂಚಿಸಿದ ಆದೇಶವನ್ನು ಪಾಲಿಸಿದ್ದೇನೆ. ನಮ್ಮ ಮನೆಗೆ ಪರಿವಾರದವರು ಮುಖಂಡರು ಬಂದು ನನ್ನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ನಾನು ಪಕ್ಷದ ಸಿಪಾಯಿ ಎಂದರು.