ಶಿವಮೊಗ್ಗ:ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಇಲಾಖೆಯಿಂದ ಡಿನೋಟಿಫೈ ಆದ ಪ್ರದೇಶಗಳ ವಿವರ ಹಾಗೂ ಸಂತ್ರಸ್ತರ ಸಮಗ್ರ ಮಾಹಿತಿ ಸಂಗ್ರಹಣೆಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ.. ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕಾರ್ಯದಲ್ಲಿ ಪ್ರಗತಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅವರು ಪ್ರಗತಿ ಪರಿಶೀಲನೆ ನಡೆಸಿದರು.ಹಲವು ದಶಕಗಳಿಂದ ಬಾಕಿ ಉಳಿದಿರುವ ಈ ಸಮಸ್ಯೆಯನ್ನು ಬಗೆಹರಿಸಲು ಜಂಟಿ ಸರ್ವೆ ನಡೆಸಿ 20 ದಿನದೊಳಗಾಗಿ ಒಂದು ಹಂತಕ್ಕೆ ತರುವಂತೆ ಅವರು ತಿಳಿಸಿದರು.
ಮುಳುಗಡೆ ಸಂತ್ರಸ್ತರಿಗೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಂತೆ ಅರಣ್ಯ ಪ್ರದೇಶದಲ್ಲಿ 8,285 ಎಕರೆ ಕಂದಾಯ ಭೂಮಿಯಲ್ಲಿ 1,100 ಎಕರೆ, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯೇತರ ಜಿಲ್ಲೆಗಳಲ್ಲಿ 387ಎಕರೆ ಸೇರಿ ಒಟ್ಟು 9,773 ಎಕರೆ ಜಮೀನು ಮೀಸಲಿರಿಸಲಾಗಿದೆ. ಇದರಲ್ಲಿ 6,303 ಎಕರೆ ಡಿನೋಟಿಫೈ ಮಾಡಲಾಗಿದೆ.
ಸಂತ್ರಸ್ತರಿಗಾಗಿ ಮೀಸಲಾಗಿರಿಸಿರುವ ಪ್ರದೇಶದಲ್ಲಿ ಇನ್ನೂ 1,982 ಎಕರೆ ಡಿ ನೋಟಿಫೈ ಮಾಡಲು ಬಾಕಿ ಇದೆ. ಜಂಟಿ ಸಮೀಕ್ಷೆ ನಂತರ ಫಲಾನುಭವಿವಾರು ಡಿನೋಟಿಫಿಕೇಶನ್ ವಿಸ್ತೀರ್ಣಕ್ಕೆ ಆರ್ಟಿಸಿಯಲ್ಲಿ 3,565 ಎಕರೆ ತಾಳೆಯಾಗಿದೆ. 2,737 ಎಕರೆ ಇನ್ನೂ ತಾಳೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಅವರು ಮಾಹಿತಿ ನೀಡಿದರು.ಇದು ಕ್ಲಿಷ್ಟಕರ ಪ್ರಕ್ರಿಯೆ. ಜಂಟಿ ಸರ್ವೆ ಮಾಡಿ ಪ್ರಕರಣವಾರು ಸಮಸ್ಯೆ ಬಗೆಹರಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ವಿಶೇಷ ಅಧಿಕಾರಿಯನ್ನೂ ನೇಮಕ ಮಾಡಿದರೆ ಪ್ರಕ್ರಿಯೆ ತ್ವರಿತಗೊಳಿಸಬಹುದಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಅವರೊಂದಿಗೆ ಸಭೆ: ಚಕ್ರಾ,ಸಾವೆಹಕ್ಲು ಯೋಜನೆಯಡಿ ಭೂಮಿ ಕಳೆದುಕೊಂಡಿರುವವರಿಗೆ ಸಮಗ್ರ ಪರಿಹಾರ ಒದಗಿಸಲು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು. ತೀರ್ಥಹಳ್ಳಿ ತಾಲೂಕಿನಲ್ಲಿ ಹಲವು ಕಂದಾಯ ಜಮೀನನ್ನು ಪ್ರಸ್ತಾವಿತ ಅರಣ್ಯ ಎಂದು ಆರ್ಟಿಸಿಯಲ್ಲಿ ನಮೂದು ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ.
ತಕ್ಷಣ ಅದನ್ನು ಸರಿಪಡಿಸಬೇಕು ಎಂದು ಶಾಸಕ ಅರಗ ಜ್ಞಾನೇಂದ್ರ ಅವರು ಒತ್ತಾಯಿಸಿದರು. ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್ ಚನ್ನಬಸಪ್ಪ, ಸಿಸಿಎಫ್ ಶ್ರೀನಿವಾಸುಲು, ಅಪರ ಜಿಲ್ಲಾಧಿಕಾರಿ ಅನುರಾಧ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.