'ಸನಾತನ ಧರ್ಮದ ಕುರಿತು ಚರ್ಚೆಗೆ ಬರಲಿ' ಶಿವಮೊಗ್ಗ: ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಅವರು ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಇದು ನನ್ನ ನಿರ್ಧಾರ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸವಾಲು ಹಾಕಿದ್ದಾರೆ.
ಶಿವಮೊಗ್ಗದ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ. ನಾನು ಹಲವು ಪುಸ್ತಕಗಳನ್ನು ಓದಿದ್ದೇನೆ. ಸನಾತನ ಧರ್ಮಕ್ಕೆ ನಿಘಂಟಿನಲ್ಲಿ ಏನು ಅರ್ಥವಿದೆ ಎಂದು ಗಮನಿಸಿದ್ದೇನೆ. ನಾನು ಯಾವತ್ತೂ ಸನಾತನ ಧರ್ಮದ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಅಷ್ಟಕ್ಕೂ ಸನಾತನ ಧರ್ಮಕ್ಕೆ ಪ್ರತ್ಯೇಕ ಕೃತಿಯೂ ಇಲ್ಲ. ಅದನ್ನು ಬರೆದವರು ಯಾರೂ ಇಲ್ಲ. ಅನಾದಿಕಾಲದಿಂದ ಬಂದಿದ್ದನ್ನೇ ನಾವು ಸನಾತನ ಧರ್ಮ ಎಂದು ಹೇಳುತ್ತೇವೆ ಎಂದರು.
ನಾನು ನೂರಕ್ಕೆ ನೂರು ಹಿಂದೂ ಧರ್ಮಕ್ಕೆ ಸೇರಿದವನು. ನನ್ನ ತಂದೆ, ತಾಯಿ, ಅಜ್ಜ, ಅಜ್ಜಿ ಇಬ್ಬರ ಮೂಲಕ ನಾವು ಹಿಂದೂ ಧರ್ಮದ ಮೇಲೆ ಪೂರ್ಣ ನಂಬಿಕೆ, ವಿಶ್ವಾಸವಿದೆ. ದೇವರ ಮೇಲೆ ನಂಬಿಕೆ ಇದೆ. ಹಿಂದೂ ಧರ್ಮ ಉಳಿಯಬೇಕು, ಬೆಳೆಯಬೇಕು ಹಾಗು ಒಳ್ಳೆಯ ರೀತಿ ಇರಬೇಕು ಎಂದರೆ ನ್ಯೂನತೆ, ಅಸಮಾನತೆಗಳನ್ನು ತೆಗೆದು ಹಾಕಬೇಕು ಎಂದು ತಿಳಿಸಿದರು.
ಸೈದ್ಧಾಂತಿಕವಾಗಿ ನಾನು ಬಿಜೆಪಿಯನ್ನು ವಿರೋಧ ಮಾಡುತ್ತೇನೆ. ವೈಯಕ್ತಿಕವಾಗಿ ನಾನು ಯಾರ ವಿರೋಧಿಯೂ ಅಲ್ಲ. ಬಿಜೆಪಿಯೊಂದಿಗೆ ಎಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಹಾಗೆ ನೋಡಿದರೆ ದೇವಸ್ಥಾನಗಳಿಗೆ ಆರಗ ಜ್ಞಾನೇಂದ್ರರಿಗಿಂತ ಹೆಚ್ಚು ಹಣ ಕೊಟ್ಟವನೇ ನಾನು ಎಂದರು. ಸಾಹಿತ್ಯ ಪರಿಷತ್‍ಗೆ ಜಾಗ ಕೊಟ್ಟಿದ್ದು ನಾನು, ಹೀಗಿರುವಾಗ ನಾನು ಹಿಂದೂ ಧರ್ಮದ ವಿರೋಧಿ ಎಂದು ಹೇಗೆ?. ಆರ್ಎಸ್ಎಸ್, ರಾಮಸೇನೆ, ಬಿಜೆಪಿ ಇವೆಲ್ಲವೂ ಒಂದೇ ಸಂತಾನ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಇದನ್ನೂ ಓದಿ:ಆರ್ಎಸ್ಎಸ್ ಮ್ಯೂಸಿಯಂಗೆ ಅಸ್ಪೃಶ್ಯರಿಗೆ ಪ್ರವೇಶವಿಲ್ಲ ಅನ್ನೋದು ಹಸಿ ಸುಳ್ಳು: ಮಾಜಿ ಶಾಸಕ ಎನ್ ಮಹೇಶ್