ಶಿವಮೊಗ್ಗ:ಶಾರ್ಟ್ ಸರ್ಕ್ಯೂಟ್ನಿಂದಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದ ಓಬಿಜಿಯಲ್ಲಿನ ಐಸಿಯುನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ರೋಗಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತುರ್ತು ಚಿಕಿತ್ಸಾ ಕೊಠಡಿ, ಐಸಿಯು ಮತ್ತು ಮಕ್ಕಳ ವಾರ್ಡ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆ ಸಿಬ್ಬಂದಿ ವಾರ್ಡ್ನಲ್ಲಿದ್ದ ಬಾಣಂತಿಯರು ಮತ್ತು ಪುಟ್ಟ ಕಂದಮ್ಮಗಳನ್ನು ಕರೆದುಕೊಂಡು ಹೊರಗೆ ಓಡಿ ಬಂದಿದ್ದಾರೆ. ಸುಮಾರು 80ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳ ಸ್ಥಿತಿ ಗಂಭೀರ:
ಬೆಂಕಿ ಅವಘಡಲ್ಲಿ ಐಸಿಯುನಲ್ಲಿದ್ದವರನ್ನು ಹೊರಗೆ ಕರೆತರುವ ವೇಳೆ ಪ್ರಸನ್ನ ಹಾಗೂ ರೂಪೇಶ್ ಎಂಬಿಬ್ಬರು ಸೆಕ್ಯೂರಿಟಿ ಗಾರ್ಡ್ಗಳು ಹೊಗೆ ಕುಡಿದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿದ್ದ ರೋಗಿಗಳ ರಕ್ಷಣೆ ಯಾವುದೇ ಪ್ರಾಣ ಹಾನಿಯಾಗಿಲ್ಲ:
ಕ್ಯಾಸೆಟ್ ಎಸಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಘಟನೆ ನಡೆದಿದೆ. ತಕ್ಷಣ ತಮ್ಮ ಸಿಬ್ಬಂದಿ ವಾರ್ಡ್ನಲ್ಲಿದ್ದ ಎಲ್ಲಾ ರೋಗಿಗಳನ್ನು ಹೊರಗೆ ಕರೆ ತಂದಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ಬಗ್ಗೆ ಸಂಬಂಧಪಟ್ಟ ವಿಭಾಗದವರಿಂದ ತನಿಖೆ ನಡೆಸಲಾಗುವುದು. ರೋಗಿಗಳು ಹಾಗೂ ಅವರ ಕಡೆಯವರು ಗಾಬರಿಯಾಗುವುದು ಬೇಡ ಎಂದು ಮೆಗ್ಗಾನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರ್ ಹೇಳಿದರು.
ಇದನ್ನೂ ಓದಿ:ಮಾದಕ ವಸ್ತು ಸೇವನೆ ದೃಢ: ಇಂದಿರಾನಗರದ ವಿಷ್ಣು ಭಟ್ ನಿವಾಸದ ಮೇಲೆ ಪೊಲೀಸ್ ದಾಳಿ