ಶಿವಮೊಗ್ಗ :ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಮೀಸಲು ವಿಚಾರದಲ್ಲಿ ಚುನಾವಣಾ ಆಯೋಗ ರಾಜ್ಯ ಸರ್ಕಾರವನ್ನು ಕೇಳಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಚುನಾವಣೆಯನ್ನು ಕೋವಿಡ್ ಇರುವ ಕಾರಣ ಡಿಸೆಂಬರ್ವರೆಗೂ ನಡೆಸುವುದು ಬೇಡ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೂ ಆಯೋಗ ಚುನಾವಣೆಯ ಮೀಸಲಾತಿಯನ್ನು ಘೋಷಣೆ ಮಾಡಿದೆ. ಇದಕ್ಕೆ ನನ್ನ ಅಭ್ಯಂತರವಿಲ್ಲ ಎಂದರು. ಮೀಸಲಾತಿ ವಿಚಾರದಲ್ಲಿ ಕೆಲವು ಗೊಂದಲ, ಅಸಮಾಧಾನ ಇದೆ.
ಚುನಾವಣಾ ಆಯೋಗ ರಾಜ್ಯ ಸರ್ಕಾರದ ಜೊತೆ ಚರ್ಚೆ ನಡೆಸದೆ ಮೀಸಲಾತಿ ಘೋಷಿಸಿದೆ. ಈ ಬಗ್ಗೆ ಚರ್ಚಿಸಿದ್ದರೆ, ನಮ್ಮ ಸಲಹೆಯನ್ನು ನೀಡುತ್ತಿದ್ದೆವು. ಆದರೆ, ಈ ಕೆಲಸವನ್ನು ಚುನಾವಣಾ ಆಯೋಗ ಮಾಡಿಲ್ಲ. ರಾಜ್ಯದ ಎಲ್ಲಾ ಕಡೆಯಿಂದ ಮೀಸಲಾತಿ ಸರಿ ಇಲ್ಲ ಎಂಬ ಮಾಹಿತಿ ಬರುತ್ತಿದೆ. ಮೀಸಲಾತಿ ಅಸಮಾಧಾನವನ್ನು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದಲೂ ಸಹ ಹೊರ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಈ ಕುರಿತು ರಾಜ್ಯ ಸರ್ಕಾರಕ್ಕೆ ಏನೂ ಮಾಡಲಾಗದ ಸ್ಥಿತಿ ಇದ್ದು, ಚುನಾವಣಾ ಆಯೋಗದ ತೀರ್ಮಾನವೇ ಅಂತಿಮವಾಗಿದೆ. ಅನುಭವದ ಆಧಾರದ ಮೇಲೆ ರಾಜ್ಯ ಸರ್ಕಾರ ಕೆಲವು ಸಲಹೆಗಳನ್ನು ನೀಡುತ್ತಿತ್ತು. ಚುನಾವಣೆ 5 ದಿನ ಇರುವಾಗ ಮೀಸಲಾತಿ ಘೋಷಣೆ ಮಾಡಬಹುದಿತ್ತು. ಚುನಾವಣಾ ಆಯೋಗ 6 ತಿಂಗಳ ಮೊದಲೇ ಮೀಸಲಾತಿ ಘೋಷಣೆ ಮಾಡಿದೆ. ಈಗಾಗಲೇ ಆಕಾಂಕ್ಷಿಗಳ ಮನೆ ಮುಂದೆ ಜನ ಆಗಮಿಸಲು ಪ್ರಾರಂಭಿಸುತ್ತಿದ್ದಾರೆ. ಇದರಿಂದ ಆಕಾಂಕ್ಷಿಗಳು ಮನೆ-ಮಠ ಮಾರಬೇಕಾಗುತ್ತದೆ ಎಂದರು.
ಚುನಾವಣೆ ಯಾವಾಗ ಘೋಷಣೆ ಮಾಡ್ತಾರೆ ಎಂಬುದು ಗೊತ್ತಿಲ್ಲ. ಚುನಾವಣೆ ಯಾವ ಸಂದರ್ಭದಲ್ಲಿ ಆದರೂ ರಾಜ್ಯ ಸರ್ಕಾರ ಸಿದ್ಧವಿದೆ. ಬಿಜೆಪಿ ಪಕ್ಷ ಸಹ ಸಿದ್ಧವಿದೆ. ಆದರೆ, ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಉತ್ತರ ಪ್ರದೇಶದ ರೀತಿಯ ರಾಜ್ಯದಲ್ಲಿಯೂ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಜನಸಂಖ್ಯಾ ನಿಯಂತ್ರಣದ ಸಾಧಕ- ಭಾದಕ ನೋಡಿ ತೀರ್ಮಾನ :ಜನಸಂಖ್ಯಾ ನಿಯಂತ್ರಣ ಜಾರಿ ಕುರಿತು ಉತ್ತರಪ್ರದೇಶ ತೆಗೆದುಕೊಂಡ ನಿರ್ಧಾರ ಸ್ವಾಗತರ್ಹವಾಗಿದೆ. ಜನಸಂಖ್ಯಾ ನಿಯಂತ್ರಣದ ಸಲುವಾಗಿ ಕುಟುಂಬಕ್ಕೆ ಇಬ್ಬರೇ ಮಕ್ಕಳು ಎಂಬ ನಿಯಮ ತಂದಿದ್ದಾರೆ. ಆ ದಿಕ್ಕಿನಲ್ಲಿ ರಾಜ್ಯದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇವೆ. ದೇಶದ ಜನಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿದೆ.
ಜನಸಂಖ್ಯೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಸಹ ಬಹಳ ಪ್ರಯತ್ನ ನಡೆಸುತ್ತಿದೆ. ಆದರೆ, ನಿಯಂತ್ರಣಕ್ಕೆ ಬರುತ್ತಿಲ್ಲ. ಉತ್ತರಪ್ರದೇಶ ಸರ್ಕಾರ ಒಂದು ಪ್ರಯತ್ನ ಮಾಡ್ತಿದೆ. ಅವರ ಪ್ರಯತ್ನ ಹೇಗೆ ಆಗುತ್ತದೆ ಎಂಬುದನ್ನು ನೋಡಿ ರಾಜ್ಯದಲ್ಲೂ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಸಚಿವ ಈಶ್ವರಪ್ಪ :ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದ ಕಟ್ಟಡ ಕಾರ್ಮಿಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಅವರು ದಿನಸಿ ಕಿಟ್ ವಿತರಿಸಿದರು. ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮವನ್ನು ಉದ್ಘಾಟಿಸಿ ನಗರ ವ್ಯಾಪ್ತಿಯ 10.399 ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ನೀಡಿದರು.
ಓದಿ:ಕೊರೊನಾ ಏಟಿಗೆ ಬರಿದಾದ ರಾಜ್ಯದ ಬೊಕ್ಕಸ: 8 ಸಾವಿರ ಕೋಟಿ ರೂ ಸಾಲ ಪಡೆಯಲು ನಿರ್ಧಾರ